ಶವ ಸಂಸ್ಕಾರಕ್ಕೆ ಬೆಳೆದ ಜೋಳ ಕಟಾವು
ವರದಿ-ಶಾರುಕ್ ಖಾನ್, ಹನೂರು
ಹನೂರು : ಜಮೀನಿನಲ್ಲಿ ಬೆಳೆದಿದ್ದ ಜೋಳವನ್ನು ಕಟಾವು ಮಾಡಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟ ಮಾನವೀಯ ಘಟನೆ ಹನೂರು ತಾಲ್ಲೂಕಿನ ಹುತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೆಂಕಟಶೆಟ್ಟಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಂಬಾರ ಜನಾಂಗಕ್ಕೆ ಸೇರಿದ ಪುಟ್ಟ ರಾಚಶೆಟ್ಟಿ ಇಂದು ನಿಧನರಾಗಿದ್ದರು. ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ಕುಟುಂಬದವರು ಶವ ಸಂಸ್ಕಾರಕ್ಕೆ ಪರದಾಡಿದರು. ಮೃತ ಪುಟ್ಟರಾಜಶೆಟ್ಟಿ ಅವರಿಗೆ ಜಮೀನು ಇರಲಿಲ್ಲ. ಈ ಹಿಂದೆ ಗ್ರಾಮದಲ್ಲಿ ಜಮೀನಿಲ್ಲದ ವ್ಯಕ್ತಿಗಳು ಮೃತಪಟ್ಟರೇ, ಅವರ ಶವ ಸಂಸ್ಕಾರ ಇಲ್ಲಿನ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಅರಣ್ಯಾಧಿಕಾರಿಗಳು ಶವ ಸಂಸ್ಕಾರಕ್ಕೆ ನಿರ್ಬಂಧ ಹೇರಿದ ಕಾರಣ ಪುಟ್ಟರಾಜಶೆಟ್ಟಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬದವರು ಪರದಾಡುತ್ತಿದ್ದನ್ನು ಕಂಡ ಗ್ರಾಮದ ಬಣಜಿಗ ಜನಾಂಗಕ್ಕೆ ಸೇರಿದ ಹರೀಶ್ ಕೂಡಲೇ ತಮ್ಮ ಜಮೀನಿನಲ್ಲಿ ಬೆಳೆದು ನಿಂತಿದ್ದ ಜೋಳವನ್ನು ಕಟಾವು ಮಾಡಿ ಶವ ಸಂಸ್ಕಾರ ನಡೆಸಲು ಸ್ಥಳಾವಕಾಶ ಮಾಡುವ ಮೂಲಕ ಮಾನವೀಯತೆ ತೋರಿದರು.
೪೦೦ ಕುಟುಂಬಗಳಿರುವ ವೆಂಕಟಶೆಟ್ಟಿ ದೊಡ್ಡ ಗ್ರಾಮವಾಗಿದ್ದು, ಗ್ರಾಮದಲ್ಲಿ ಸೂಕ್ತ ಸ್ಮಶಾನ ಇಲ್ಲದ ಕಾರಣ ಹಲವಾರು ಬಾರಿ ಗ್ರಾಮಸ್ಥರು ಸ್ಮಶಾನ ಕೋರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ಮತ್ತು ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಗ್ರಾಮಕ್ಕೆ ಸ್ಮಶಾನ ಮಂಜೂರು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು