ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯಿಂದರೈಲ್ವೆ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಪತ್ರ
ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯಿಂದ
ರೈಲ್ವೆ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಪತ್ರ
ವರದಿ-ನಜೀರ್ ಅಹಮದ್
ಮೈಸೂರು : ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ.ದೇವರಾಜ ಅರಸು ಅವರ ಹೆಸರನ್ನು ಮೈಸೂರು ರೈಲ್ವೆ ನಿಲ್ದಾಣಕ್ಕೆ ಇಡುವಂತೆ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷಾಪನಾ ಸಮಿತಿ ರೈಲ್ವೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದೆ.
ಸೋಮವಾರ ಬೆಳಿಗ್ಗೆ ಸಮಿತಿ ಸದಸ್ಯರು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿ ಅವರ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
೧೯೭೩ ನವೆಂಬರ್ ೧ ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ಅವರು ಒಬ್ಬ ದೂರದೃಷ್ಟಿಯ ನಾಯಕರು ಅವರ ಆಡಳಿತದಲ್ಲಿನ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ಸಾಧ್ಯವಾಯಿತು. ಗೇಣಿ ಶಾಸನ, ಹಾವನೂರು ಆಯೋಗ ದಂತಹ ಪ್ರಮುಖ ನಿರ್ಧಾರಗಳು, ರಾಜ್ಯದ ಹಿಂದುಳಿದ ವರ್ಗಗಳ ಸಾಮಾಜಿಕ ಬದಲಾವಣೆಗೆ ನಾಂದಿಯಾದವು. ಅರಸು ಕರ್ನಾಟಕದ ಶ್ರೇಷ್ಠ ಸಮಾಜ ಸುಧಾರಕರು ಎಂದು ಪ್ರಸಿದ್ಧರಾಗಿದ್ದಾರೆ. ಅವರ ಭೂ ಸುಧಾರಣೆಗಳು ರಾಜ್ಯದಾದ್ಯಂತ ಭೂ ಹಂಚಿಕೆಯನ್ನು ಸಮೀಕರಿಸುವಲ್ಲಿ ಮೊದಲ ಹೆಜ್ಜೆಯಾಗಿತ್ತು. ಇದರೊಂದಿಗೆ ಮೈಸೂರು ದಸರಾ ಹಬ್ಬವನ್ನು ನಾಡಹಬ್ಬವೆಂದು ಅಧಿಕೃತವಾಗಿ ಘೋಷಣೆ ಮಾಡಿದ ಕೀರ್ತಿಯೂ ಅರಸು ಅವರಿಗೆ ಸಲ್ಲುತ್ತದೆ. ವಲಸೆ ಕಾರ್ಮಿಕರಿಗೆ ಆಶ್ರಯ, ಗ್ರಾಮೀಣ ಸಾಲ ಮನ್ನಾ ಮತ್ತು ರಾಜ್ಯದಾದ್ಯಂತ ಪ್ರತಿ ಮನೆಗೆ ವಿದ್ಯುತ್ ಮುಂತಾದ ಸುಧಾರಣೆಗಳಿಂದ ರಾಜ್ಯದ ಮನೆ ಮಾತಾಗಿರುವ ಅರಸು ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಡಿ.ದೇವರಾಜ ಅರಸು ಹೆಸರಿಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ಮಾಜಿ ಮೇಯರ್ ಪುರುಷೋತ್ತಮ್, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಆರ್ಯ, ದಲಿತ ಪ್ರಗತಿಪರ ಒಕ್ಕೂಟಗಳ ಸಂಚಾಲಕ ಪಿ.ರಾಜು, ಸಮಿತಿ ಪ್ರಧಾನ ಸಂಚಾಲಕ ಅರವಿಂದ ಶರ್ಮ, ರದಿವುಲ್ಲ ಖಾನ್ ಇನ್ನಿತರರು ಇದ್ದರು.
