ಮಹದೇಶ್ವರ ಬೆಟ್ಟದಲ್ಲಿ ಟೋಲ್ ಮಾಫಿಯಾ? ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ
ಅಕ್ಟೋಬರ್ 10, 2022
ಸಾರ್ವಜನಿಕರ ಆರೋಪ : ಸೂಕ್ತ ಕ್ರಮಕ್ಕೆ ಪ್ರಾಧಿಕಾರಕ್ಕೆ ಮನವಿ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹಾಗೂ ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟಕ್ಕೆ ಪ್ರವೇಶಿಸುವ ಮುಖ್ಯದ್ವಾರದ ಬಳಿ ಪ್ರಾಧಿಕಾರದಿಂದ ನಿರ್ಮಿಸಿರುವ ಟೋಲ್‌ನಲ್ಲಿ ವಾಹನಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ದ್ವಿಚಕ್ರ ವಾಹನಗಳಿಗೆ ೧೦ ರೂ, ಆಟೋ ರಿಕ್ಷಾಗಳಿಗೆ ೨೦ ರೂ, ವ್ಯಾನು, ಜೀಪು ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ೩೦ ರೂ. ಟೆಂಪೂ ಟ್ರಾವೆಲರ್ ಬಸ್ಸು, ಮಿನಿ ಬಸ್ಸು, ಮಿನಿ ಲಾರಿ, ಮಿನಿ ಪ್ರವಾಸಿ ಬಸ್ಸು ಇನ್ನಿತರ ಆರು ಚಕ್ರದ ವಾಹನಗಳಿಗೆ ೫೦ ರೂ. ಹಾಗೂ ಪ್ರವಾಸಿ ಬಸ್ಸು, ಜೆಸಿಬಿ, ೧೦ ಚಕ್ರ ಮೇಲ್ಪಟ್ಟ ವಾಹನಗಳಿಗೆ ೧೦೦ ರೂಪಾಯಿಗಳ ಪ್ರವೇಶ ಶುಲ್ಕವನ್ನು ಪ್ರಾಧಿಕಾರ ನಿಗದಿ ಪಡಿಸಿದೆ.
ಆದರೆ, ಗುತ್ತಿಗೆದಾರರು ಪ್ರವಾಸಿ ಬಸ್ಸುಗಳಿಂದ ೨೦೦ ರೂ. ಟೆಂಪೊ ವಾಹನಗಳಿಂದ ೧೦೦ ರೂ. ಡೆಯುತ್ತಿರುವುದಾಗಿ ಸಾರ್ವಜನಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರು ಎಷ್ಟೇ ಹಣ ಕೊಟ್ಟು ಟೆಂಡರ್ ಪಡೆದರೂ ಪ್ರಾಧಿಕಾರ ನಿಗದಿ ಪಡಿಸಿದ ಹಣವನ್ನು ಮಾತ್ರ ವಾಹನಗಳಿಂದ ಪಡೆಯಬೇಕು ಎಂಬ ನಿಯಮವಿದ್ದರೂ ಗುತ್ತಿಗೆದಾರರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆಕ್ಷೇಪ ಎತ್ತಿದ ವಾಹನ ಚಾಲಕರಿಗೆ ಟೋಲ್ ಗೇಟ್ ಸಿಬ್ಬಂದಿ ಧಮಕಿ ಹಾಕುತ್ತಾರೆ. ನಮಗೆ ಜಾಸ್ತಿ ಹಣಕ್ಕೆ ಟೆಂಡರ್ ಆಗಿದೆ. ಇದಕ್ಕಾಗಿ ಹೆಚ್ಚು ಹಣ ನೀಡಬೇಕು ಎಂದು ಗದರುತ್ತಾರೆ. ಕೂಡಲೇ ಇವರ ಗುತ್ತಿಗೆಯನ್ನು ರದ್ದುಪಡಿಸಿ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು