ಮೈಸೂರು : ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅರಮನೆಯ ಕೋಟೆ ಕುಸಿದ ಬೆನ್ನಲ್ಲೇ ಇಂದು ಬೆಳಿಗ್ಗೆ ಮಹಾರಾಣಿ ಕಾಲೇಜಿನ ಮೇಲ್ಚಾವಣಿ ಕುಸಿದು ಕಟ್ಟಡ ನೆಲಕ್ಕುರುಳಿದೆ. ಮೈಸೂರಿನಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಪಾರಂಪರಿಕ ಕಟ್ಟಡಗಳು ಕುಸಿದು ಬೀಳುತ್ತಿದ್ದು, ಇದರ ಸಾಲಿಗೆ ಮಹಾರಾಣಿ ಕಾಲೇಜಿನ ಕಟ್ಟಡವೂ ಸೇರಿದೆ. 10 ಸೆಕೆಂಡುಗಳ ಇದರ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಚಾಮುಂಡಿಬೆಟ್ಟದಲ್ಲೂ ಭೂ ಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದ್ದು, ವಿಶೇಷವಾಗಿ ಲ್ಯಾನ್ಸ್‍ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಸೇರಿದಂತೆ ಹಳೆಯ ಪಾರಂಪರಿಕ ಕಟ್ಟಡಗಳ ಸುರಕ್ಷತೆ ಮತ್ತು ಅದರಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಸಾರ್ವಜನಿಕರ ಸುರಕ್ಷತೆಯ ಬಗ್ಗೆಯೂ ಗಮನ ಹರಿಸುವಂತೆ ಸಾರ್ವಜನಿಕರು ಮಹಾನಗರಪಾಲಿಕೆಗೆ ಒತ್ತಾಯಿಸಿದ್ದಾರೆ. ಮಹಾರಾಣಿ ಕಾಲೇಜು ಕಟ್ಟಡ ಬೆಳಿಗ್ಗೆ ಬಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಹಳೆಯ ಕಟ್ಟಡಗಳಲ್ಲಿ ಪಾಠ ಪ್ರವಚನ ಮಾಡುವುದು ಬೇಡ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
0 ಕಾಮೆಂಟ್‌ಗಳು