ಚಾಲಕನ ಅಜಾಗರೂಕತೆಯಿಂದ ಬಸ್ ಚಕ್ರಕ್ಕೆ ಸಿಲುಕಿ ಬಾಲಕನೊಬ್ಬನ ದಾರುಣ ಸಾವು
ಅಕ್ಟೋಬರ್ 28, 2022
ನಂಜನಗೂಡು ಬಸ್ ನಿಲ್ದಾಣದಲ್ಲಿ ಘಟನೆ
ವರದಿ-ಹೆಚ್.ಎಸ್.ಚಂದ್ರ, ನಂಜನಗೂಡು
ನಂಜನಗೂಡು : ಚಾಲಕನ ಅಜಾಗರುಕತೆಯಿಂದ ಬಾಲಕನೊಬ್ಬ ಬಸ್ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಸರಗೂರು ತಾಲ್ಲೂಕು ನಂಜೀಪುರ ಗ್ರಾಮದ 14 ವರ್ಷದ ಪ್ರಜ್ವಲ್ ಮೃತ ಬಾಲಕ. ಈತ ತನ್ನ ತಂದೆ ಪ್ರಕಾಶ್ ಅವರೊಂದಿಗೆ ಟಿ.ನರಸೀಪುರಕ್ಕೆ ತಮ್ಮ ದ್ವಿಚಕ್ರ ವಾಹನ ಬಿಡಲು ಹೋಗಿದ್ದು, ವಾಪಸ್ ಬಂದು ಮತ್ತೇ ಹುಲ್ಲಹಳ್ಳಿಗೆ ಹೋಗಲು ಬಸ್ ಹತ್ತುವಾಗ ಈ ದುರ್ಘಟನೆ ಸಂಭವಿಸಿದೆ.
ಪ್ರಜ್ವಲ್ ಮತ್ತು ಪ್ರಕಾಶ್ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ನ ಮುಂದಿನ ಬಾಗಿಲಿನಲ್ಲಿ ಹತ್ತುವಾಗ ಚಾಲಕ ಇಬ್ಬರನ್ನೂ ಗದರಿ ಇದು ಮಹಿಳೆಯರು ಹತ್ತುವ ಜಾಗ ನೀವು ಹಿಂದಿನ ಬಾಗಿಲಿನಿಂದ ಹತ್ತಿ ಎಂದು ಹೇಳಿದನು ಎನ್ನಲಾಗಿದೆ. ಈ ವೇಳೆ ಪ್ರಕಾಶ್ ಮತ್ತು ಪ್ರಜ್ವಲ್ ಕೆಳಕ್ಕೆ ಇಳಿಯುವಾಗ ಚಾಲಕ ಬಸ್‍ನ್ನು ಮುಂದಕ್ಕೆ ಚಲಿಸಿದಾಗ ಪ್ರಜ್ವಲ್ ಆಯ ತಪ್ಪಿ ಬಸ್ಸಿನಿಂದ ಕೆಳಕ್ಕೆ ಬಿದ್ದಾಗ ಆತನ ಮೇಲೆ ಚಲಿಸುತ್ತಿದ್ದ ಬಸ್ಸಿನ ಚಕ್ರ ಹರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ತನ್ನ ಕಣ್ಣ ಮುಂದೆಯೇ ಮಗನ ದಾರುಣ ಸಾವನ್ನು ಕಂಡ ತಂದೆ ಪ್ರಕಾಶ್ ಅವರ ರೋಧನ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ಮಗನ ಸಾವು, ತಂದೆಯ ರೋಧನ ಕಂಡು ಕಣ್ಣೀರಿಟ್ಟರು.
ಮೃತ ಬಾಲಕ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ನಂಜನಗೂಡು ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿದ್ದಾರೆ.
0 ಕಾಮೆಂಟ್‌ಗಳು