ಮೈಸೂರಿನಲ್ಲಿ ನಿಷೇಧಿತ ಪ್ಲಾಸ್ಟಿಕ್ ಕವರ್ ಗಳ ಎಗ್ಗಿಲ್ಲದ ಮಾರಾಟ : ಜನ ಸಂಗ್ರಾಮ್ ಪರಿಷತ್ ನಿಂದ ಜಿಲ್ಲಾಧಿಕಾರಿಗಳಿಗೆ ದೂರು

ಮೈಸೂರು : ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಕೈ ಚೀಲಗಳನ್ನು ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದ್ದು, ಇವುಗಳ ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜನಸಂಗ್ರಾಮ್ ಪರಿಷತ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಿಷೇಧಿತ ಪ್ಲಾಸ್ಟಿಕ್ ಬಳಕೆಯು ಪರಿಸರ, ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರಲಿದ್ದು, 51 ಮೈಕ್ರೋನ್ ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದರೂ ಕಾಳಸಂತೆಯಲ್ಲಿ ಇವುಗಳ ಮಾರಾಟ ನಡೆದಿದೆ ಎಂದು ಅರ್ಜಿದಾರರು ಆರೋಪಿಸಿದರು.

ನಗರದಲ್ಲಿ ನಿಷೇಧಿತ  ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿ ಬ್ಯಾಗ್ ಕವರ್,  ಪ್ಲಾಸ್ಟಿಕ್ ಪ್ಲೇಟುಗಳು, ನಾನ್ ಓವನ್ (ಪಾಲಿ ಪ್ರಮೋಲಿನ್) ಧ್ವಜ, ಪ್ಲೆಕ್ಸ್, ಎಸ್.ಯು.ಪಿ ಪ್ಲಾಸ್ಟಿಕ್ ಕಂಟೈನರ್ ಬಳಕೆ ಎಗ್ಗಿಲ್ಲದೇ ಸಾಗುತ್ತಿದೆ. ಸಾಮಾನ್ಯ ತರಕಾರಿ ಅಂಗಡಿಗಳಲ್ಲೂ ತೆಳು ರೀತಿಯ ಕ್ಯಾರಿ ಬ್ಯಾಗ್ ಬಳಸುತ್ತಿದ್ದಾರೆ. ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ತಿಂಡಿಗಳನ್ನು ಪಾರ್ಸಲ್ ಮಾಡಲು ಪ್ಲಾಸ್ಟಿಕ್ ಕಂಟೈನರ್, ಪ್ಲಾಸ್ಟಿಕ್ ಕೋಟೆಡ್ ಪೇಪರ್ ಪ್ಲೇಟ್ ಗಳನ್ನು ಹಾಗೂ ಪಾರ್ಸಲ್ ಹಾಳೆಗಳು ಯಥೇಚ್ಛವಾಗಿ ಬಳಕೆಯಾಗುತ್ತಿವೆ.

ನಾಗರಿಕರ ಆರೋಗ್ಯ ರಕ್ಷಣೆ ಮಾಡಬೇಕಿದ್ದ ಮಹಾನಗರ ಪಾಲಿಕೆ ಮಾರಾಟಗಾರರ ಮೇಲೆ ಕಾಟಾಚಾರದ ದಾಳಿಗಳನ್ನು ನಡೆಸಿ ಖೊಟ್ಟಿ ಮಾಲೀಕನ ವಿರುದ್ಧ ಕೇವಲ ಸಣ್ಣ ಪ್ರಮಾಣದ ದಂಡ ವಿಧಿಸಿ ಪ್ರಕರಣ ಮುಚ್ಚುತ್ತಿದ್ದಾರೆ ಎಂದು ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದಾರೆ.

ದೂರು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ತಕ್ಷಣವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳವಂತೆ ಆದೇಶಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು