ಸರ್ಕಾರಿ ಕಟ್ಟಡಗಳ ನಿರ್ವಹಣೆಗೆ ಆಯಾ ಕಚೇರಿಗಳ ಮುಖ್ಯಸ್ಥರು ಜವಾಬ್ದಾರಿ ವಹಿಸಬೇಕು : ಶಾಸಕ ಎಲ್.ನಾಗೇಂದ್ರ ಸಲಹೆ

2 ಕೋಟಿ ವೆಚ್ಚದಲ್ಲಿ ಮಹಾರಾಣಿ ಕಾಲೇಜು ನೂತನ ಕಟ್ಟಡ ನಿರ್ಮಾಣ ಮತ್ತು ನವೀಕರಣ ಕಾಮಗಾರಿಗೆ ಚಾಲನೆ

ವರದಿ-ನಜೀರ್ ಅಹಮದ್, ಮೈಸೂರು

ಮೈಸೂರು : ಪಾರಂಪರಿಕ ಕಟ್ಟಡಗಳೂ ಸೇರಿದಂತೆ ಸರ್ಕಾರಿ ಕಟ್ಟಡಗಳ ನಿರ್ವಹಣೆಯನ್ನು ಆಯಾ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕಚೇರಿಗಳ ಮುಖ್ಯಸ್ಥರು ವಹಿಸಿಕೊಂಡರೆ ಸರ್ಕಾರಿ ಕಟ್ಟಡಗಳು ಸುಭದ್ರವಾಗಿ ದೀರ್ಘಕಾಲ ಬಾಳಿಕೆ ಬರುತ್ತವೆ ಎಂದು ಶಾಸಕ ಎಲ್.ನಾಗೇಂದ್ರ ಸಲಹೆ ನೀಡಿದರು.

ಮೈಸೂರು ಮಹಾರಾಣಿ ಕಾಲೇಜಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನೂತನ ಕಾಲೇಜು ಕಟ್ಟಡಗಳ ನಿರ್ಮಾಣ ಮತ್ತು ಹಳೆಯ ಕಟ್ಟಡಗಳ ನವೀಕರಣ ಕಾಮಗಾರಿಗೆ ಅವರು ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಮೈಸೂರಿನಲ್ಲಿ 217ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ಗುರುತಿಸಲಾಗಿದೆ. 2014ರ ತನಕ ಲೋಕೋಪಯೋಗಿ ಇಲಾಖೆ ಇವುಗಳ ನಿರ್ವಹಣೆ ಮಾಡುತ್ತಿತ್ತು. ಈಗ ಯಾರೂ ನಿರ್ವಹಣೆ ಮಾಡುತ್ತಿಲ್ಲ. ನಗರಪಾಲಿಕೆ ಅಧಿಕಾರಿಗಳಿಗೆ ಇವುಗಳ ನಿರ್ವಹಣೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಪತ್ರ ಬರೆದಿದ್ದೇನೆ. ಲ್ಯಾನ್ಸ್‍ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಅಗ್ನಿಶಾಮಕ ಕಟ್ಟಡ ಕುಸಿದಿವೆ. ಸಾವು ನೋವುಗಳೂ ಉಂಟಾಗಿವೆ. ಈಗ ಮಹಾರಾಣಿ ಕಾಲೇಜು ಕಟ್ಟಡವೂ ಕುಸಿದಿದೆ. ಕೆಲವು ಕಟ್ಟಡಗಳಲ್ಲಿ ಕಚೇರಿಗಳು ನಡೆಯುತ್ತಿವೆ. ಮೈಸೂರು ಮಹಾರಾಣಿ ಕಾಲೇಜು ಸಹ ಪಾರಂಪರಿಕ ಕಟ್ಟಡವಾಗಿದ್ದು, ಮಳೆಗಾಲದಲ್ಲಿ ಛಾವಣಿ ಮೇಲೆ ಮರದ ಎಲೆಗಳು ಹರಡಿ ಮಳೆಯ ನೀರು ಸರಾಗವಾಗಿ ಹರಿಯದೆ ಟೆರೆಸ್ ಮೇಲೆಯೇ ನಿಲ್ಲುವ ಕಾರಣ ಚುರ್ಕಿ ಗಾರೆಯಿಂದ ನಿರ್ಮಿಸಿದ ನೂರಾರು ವರ್ಷಗಳ ಹಳೆಯ ಕಟ್ಟಡಕ್ಕೆ ನೀರಿಳಿದು ಅವು ಶಿಥಿಲವಾಗಿ ಕುಸಿಯುತ್ತಿವೆ. ಕನಿಷ್ಠ ನೀರು ನಿಲ್ಲದಂತೆ ಮಾಡಿದ್ದರೇ ಅವು ಇನ್ನಷ್ಟು ಕಾಲ ಬಾಳಿಕೆ ಬರುತ್ತಿದ್ದವು. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿಯಾಗಿಲ್ಲ. ಕುಸಿದ ಕಟ್ಟಡದ ಕೆಳಗೆ 40 ಲಕ್ಷ ಮೌಲ್ಯದ ಲ್ಯಾಬೋರೇಟರಿ ಉಪಕರಣ ಸಿಕಿಬಿದ್ದಿವೆ. ಅವುಗಳನ್ನು ತೆರವು ಮಾಡಲಾಗುವುದು. ಮಹಾರಾಣಿ ಕಾಲೇಜಿನೊಂದಿಗೆ ಈ ಭಾಗದ ಮಹಿಳೆಯರ ಭಾವನಾತ್ಮಕ ಸಂಬಂಧವಿದೆ. ನೂತನ ಕಟ್ಟಡಗಳ ನಿರ್ಮಾಣ ಮತ್ತು ಹಳೆಯ ಕಟ್ಟಡಗಳ ನವೀಕರಣ ನನ್ನ ಜವಾಬ್ದಾರಿ. ಎಷ್ಟೇ ಖರ್ಚಾದರೂ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅನುದಾನ ತರುತ್ತೇನೆ ಎಂದರು.
ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು