ಗುಂಡಿಬಿದ್ದ ರಸ್ತೆಗಳಲ್ಲಿ ನೀರು, ಎಲ್ಲೆಂದರಲ್ಲಿ ಕಸ, ಸೊಳ್ಳೆಗಳ ಕಾಟ, ಡೆಂಗ್ಯೂ ಭೀತಿ
ವರದಿ-ಶಾರುಕ್ ಖಾನ್, ಹನೂರು
ಹನೂರು : ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದ ಅನೈರ್ಮಲ್ಯದಿಂದ ನಲುಗುತ್ತಿರುವ ತಾಲ್ಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ಸಾಂಕ್ರಮಿಕ ರೋಗದ ಭೀತಿ ಎದುರಾಗಿದೆ.
ಗ್ರಾಮದ ಚರಂಡಿಗಳ ತುಂಬೆಲ್ಲ ಪ್ಲಾಸ್ಟಿಕ್‍ಗಳು, ಖಾಲಿ ಬಾಟಲ್, ಇನ್ನಿತರೆ ತ್ಯಾಜ್ಯಗಳು ಸಿಲುಕಿ ಕೊಳಚೆ ನೀರು ಸರಾಗವಾಗಿ ಹರಿಯದೆ ಚರಂಡಿಗಳಲ್ಲಿ ನಿಲ್ಲುವ ಕಾರಣ, ರಸ್ತೆಗಳು ಗಬ್ಬು ನಾರುತ್ತಿವೆ. ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಪಂಚಾಯ್ತಿಗೆ ಹಲವಾರು ಬಾರಿ ಅರ್ಜಿ ಕೊಟ್ಟರೂ ಸಹ ಯಾರು ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಕಾರಣ ಗ್ರಾಮದ ಮುಖ್ಯ ರಸ್ತೆಯ ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗಿ ಮಳೆ ನೀರು ನಿಂತಿರುವ ಕಾರಣ ಸೊಳ್ಳೆಗಳು ಹೆಚ್ಚಾ ಗಿವೆ. ಈಗಾಗಲೇ ಕೆಲವರಿಗೆ ಜ್ವರ ಕಾಣಿಸಿಕೊಂಡಿದ್ದು ಜನ ಭಯದಲ್ಲೇ ಬದುಕುತ್ತಿದ್ದಾರೆ. ಈ ಬಗ್ಗೆ ಇಲ್ಲಿನ ಪಿಡಿಓ ಸೋಮಶೇಖರ್ ಮನಸ್ಸು ಮಾಡಿದರೆ ಒಂದೇ ಗಂಟೆಯಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ದಿನ್ನಳ್ಳಿ ಕಸದ ಹಳ್ಳಿಯಾಗಿದೆ.
ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ. ಗ್ರಾಮದಲ್ಲಿ ಸರಿಯಾದ ಸಿಸಿ ರಸ್ತೆಗಳಿಲ್ಲ. ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಕಾರಣ ಎಲ್ಲೆಂದರಲ್ಲಿ ಕಸದ ರಾಶಿ ಉಂಟಾಗಿದೆ. ಇದರಿಂದ ದಿನ್ನಳ್ಳಿ ಕಸದ ಹಳ್ಳಿಯಾಗಿದೆ.ಗ್ರಾಮದ ಹಲವೆಡೆ ಚರಂಡಿಗಳಲ್ಲಿ ಹೂಳು ತುಂಬಿದ್ದು, ಮಳೆ ನೀರು ಬಂದಾಗ ಇಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ತೆಗೆಸಿಲ್ಲ ಇದರಿಂದ ನೀರು ತುಂಬಿಕೊಂಡಿದೆ. ಅಲ್ಲದೇ ಚರಂಡಿಯಲ್ಲಿ ಬೆಳೆದ ಗಿಡ ಗಂಟಿಗಳನ್ನು ತೆಗೆಸಿದರೆ ಗಲೀಜು ನೀರು ಸರಾಗವಾಗಿ ಹರಿಯುತ್ತದೆ.
ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕ್ರಮಕ್ಕೆ ಮುಂದಾಗಬೇಕು.
-ಸೈಯದ್ ಬಾಬು, ಗ್ರಾಮಸ್ಥರು, ದಿನ್ನಳ್ಳಿ
0 ಕಾಮೆಂಟ್‌ಗಳು