ಅನೈರ್ಮಲ್ಯದಿಂದ ಕೂಡಿದ ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆ ಆವರಣ

ಕೂಡಲೇ ಸ್ವಚ್ಛತೆ ಕಾಪಾಡದಿದ್ದರೆ ಪ್ರತಿಭಟನೆ : ಸಂಘ ಸಂಸ್ಥೆಗಳ ಎಚ್ಚರಿಕೆ   

ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ಸಾರ್ವಜನಿಕರ ಆರೋಗ್ಯಕ್ಕೆ ಪೂರಕವಾಗಿ ಶುಚಿಯಾಗಿರಬೇಕಾದ ಆಸ್ಪತ್ರೆ ಆವರಣವೇ ಹಾವು ಹಲ್ಲಿಗಳ ಆವಾಸ ಸ್ಥಾನವಾಗಿದ್ದು, ಸ್ವಚ್ಛತೆ ಇಲ್ಲದೆ, ಗಿಡಗಂಟಿಗಳು ಬೆಳೆದು ಇದು ಆಸ್ಪತ್ರೆಯೋ.? ಭೂತ ಬಂಗಲೆಯೋ ಎಂಬಂತಾಗಿದೆ. 
ಇದ್ಯಾವುದೋ ಹಳ್ಳಿಗಾಡಿನ ಗ್ರಾಮವಲ್ಲ. ಮಂಡ್ಯ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನುಂಟು ಮಾಡಿದ ಕೆ.ಎಂ.ದೊಡ್ಡಿ ಸಮುದಾಯದ ಅರೋಗ್ಯ ಕೇಂದ್ರದ ಕಥೆಯಾಗಿದೆ.
ಮೊದಲೇ ಸರ್ಕಾರಿ ಆಸ್ಪತ್ರೆ ಎಂದರೆ, ಅಷ್ಟಕ್ಕಷ್ಟೇ ಎಂಬ ಭಾವನೆ ಜನರ ಮನದಲ್ಲಿದ್ದು, ಈ ಆಸ್ಪತ್ರೆಯ ಆವರಣ ಕಂಡಾಕ್ಷಣ ಅದು ನಿಜ ಎಂಬಂತಾಗಿದೆ.  ಇಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಆಸ್ಪತ್ರೆ ಕಟ್ಟಡದ ಸುತ್ತಮುತ್ತಾ ಗಿಡ ಗಂಟಿಗಳು ಬೆಳೆದು ವಿಷಜಂತುಗಳು ಹೆಚ್ಚಿವೆ. ಸಾರ್ವಜನಿಕರು, ಆಸ್ಪತ್ರೆಗೆ ಬರುವ ರೋಗಿಗಳು ಭಯದಿಂದ ತಿರುಗಾಡುವಂತಾಗಿದೆ.  
ಇದು ನಿಜಕ್ಕೂ ಇಲ್ಲಿನ ಆಡಳಿತಾಧಿಕಾರಿಗಳ ವೈಫಲ್ಯವೂ ಹೌದು. ಸ್ಥಳಿಯ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಆಸ್ಪತ್ರೆ ಆವರಣಕ್ಕೆ ಮೊದಲು ಚಿಕಿತ್ಸೆ ನೀಡಬೇಕಿದೆ ಎಂದು ನವಚೇತನ ಸೇವಾ ಟ್ರಸ್ಟ್ ಅಧ್ಯಕ್ಷ ಜಯಂತ್ ಆಗ್ರಹಿಸಿದ್ದಾರೆ. 

ಗಿಡಗಂಟಿ ತೆರವು ಮಾಡಿಸಿ

ಸರ್ಕಾರಿ ಆಸ್ಪತ್ರೆಯ ಆವರಣ ಅತ್ಯಂತ ಅನೈರ್ಮಲ್ಯದಿಂದ ಕೂಡಿದೆ. ಎಲ್ಲೆಂದರಲ್ಲಿ ಗಿಡ ಗಂಟಿಗಳು ಬೆಳೆದಿವೆ. ಇದು ಆಸ್ಪತ್ರೆ ಮುಖ್ಯಸ್ಥರ ಬೇಜವಾಬ್ದಾರಿ. ಕನಿಷ್ಠ ತಮ್ಮ ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳದವರು ರೋಗಿಗಳಿಗೆ ಚಿಕಿತ್ಸೆ ಯಾವ ಮಟ್ಟಕ್ಕೆ ನೀಡುತ್ತಾರೆ ಎನ್ನುವುದು ತಿಳಿಯುತ್ತದೆ.

-ಕರಡಕೆರೆ ಯೋಗೇಶ್, ಜಿಲ್ಲಾಧ್ಯಕ್ಷರು. ಸಮತ ಸೈನಿಕ ದಳ 

ಶಿಥಿಲ ಕಟ್ಟಡ ತೆರವಾಗಲಿ

ಆಸ್ಪತ್ರೆಯ ಆವರಣದಲ್ಲಿ ಶಿಥಿಲಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಿ ಬೆಳೆದಿರುವ ಗಿಡಗಳನ್ನು ತೆರವುಗೋಳಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು.
-ರಘು ವೆಂಕಟೇಗೌಡ, ಅಧ್ಯಕ್ಷರು, ಆಸರೆ ಸೇವಾ ಟ್ರಸ್ಟ್