ರಾಜಕಾರಣಿಗಳಿಗೆ ಗಂಟು ಮಾಡಿಕೊಡುವ ರಸ್ತೆ ಗುಂಡಿಗಳು : ಹೊಸ ರಸ್ತೆ ನಿರ್ಮಾಣದ ವೆಚ್ಚಕ್ಕಿಂತ ಗುಂಡಿ ಮುಚ್ಚಲು ತಗಲುವ ವೆಚ್ಚವೇ ಜಾಸ್ತಿ : ಲಕ್ಷ್ಮಣ್ ಆರೋಪ

ಬಿಬಿಎಂಪಿಯಲ್ಲಿ ಗುಂಡಿ ಮುಚ್ಚುವ ನೆಪದಲ್ಲಿ ಕೊಟ್ಯಾಂತರ ರೂ. ಹಣ ಲೂಟಿ ; ತನಿಖೆಗೆ ಒತ್ತಾಯ

ಕುಸಿಯುತ್ತಿರುವ ಪಾರಂಪರಿಕ ಕಟ್ಟಡಗಳು, ಸೆಮಿ ಕಂಡಕ್ಷರ್ ಎಲ್ಲಿ? ದಸರಾ ಲೆಕ್ಕ ಕೊಡಿ

ಮೈಸೂರು : ರಸ್ತೆಗಳ ಗುಂಡಿಗಳನ್ನು ಮುಚ್ಚುವ ನೆಪದಲ್ಲಿ ಕೊಟ್ಯಾಂತರ ಹಣವನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳು ನುಂಗಿದ್ದು, ಬಿಬಿಎಂಪಿಯಲ್ಲಿ ಜನರ ತೆರಿಗೆ ಹಣವನ್ನು ಹಾಡ ಹಗಲೇ ಲೂಟಿ ಮಾಡುತ್ತಿದ್ದರೂ ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಬಿಎಂಪಿ ಹೈಕೋರ್ಟ್‍ಗೆ ನೀಡಿರುವ ಅಫಿಡವಿಟ್ ಪ್ರಕಾರ ಬೆಂಗಳೂರಿನಲ್ಲಿ ಒಟ್ಟು 2 ಸಾವಿರ ಕಿಮೀ ರಸ್ತೆ ಇದ್ದು, ಅದರಲ್ಲಿ 33 ಸಾವಿರ ಗುಂಡಿಗಳಿವೆ. ಇವುಗಳ ಪೈಕಿ 10 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ. ಇದಕ್ಕೆ 800 ಕೋಟಿ ರೂ ಖರ್ಚಾಗಿದೆ. ಉಳಿದ 23 ಸಾವಿರ ಗುಂಡಿಗಳನ್ನು ಮುಚ್ಚಬೇಕಿದೆ ಎಂದು ತಿಳಿಸಲಾಗಿದೆ.
ವಾಸ್ತವದಲ್ಲಿ ಇಂಡಿಯನ್ ರೋಡ್ ಕಾಂಗ್ರೆಸ್ ವರದಿ ಪ್ರಕಾರ 15 ಅಡಿ ಅಗಲದ ಒಂದು ಕಿಮೀ ದೂರದ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚ 1.2 ಕೋಟಿ ಆಗಿದ್ದು, ಬಿಬಿಎಂಪಿ ಕೇವಲ ಒಂದು ಕಿಮೀ ರಸ್ತೆಯ ಗುಂಡಿಗಳನ್ನು ಮುಚ್ಚಲು 1.5 ಕೋಟಿ ರೂ. ಖರ್ಚು ಮಾಡಿದೆ. ಅಂದರೆ, ಹೊಸ ರಸ್ತೆ ನಿರ್ಮಾಣದ ವೆಚ್ಚಕ್ಕಿಂತ ಹಳೆ ರಸ್ತೆಗಳ ಗುಂಡಿಗಳನ್ನು ಮುಚ್ಚಲು 1.5 ಕೋಟಿ ವೆಚ್ಚ ಮಾಡಿರುವುದು ಇಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ರಸ್ತೆಗಳ ಗುಂಡಿಗಳು ಇಲ್ಲಿನ ರಾಜಕಾರಣಿಗಳಿಗೆ ಗಂಟು ಮಾಡುವ ಸಾಧನವಾಗಿದೆ. ಈ ಹಿಂದೆ ಗುತ್ತಿಗೆದಾರರ ಸಂಘ ಆರೋಪ ಮಾಡಿದಂತೆ ಲೋಕೋಪಯೋಗಿ ಇಲಾಖೆಯಲ್ಲಿ ಶೇ.40 ಪರ್ಸೆಂಟ್ ಕಮೀಷನ್ ಇದ್ದರೆ, ಬಿಬಿಎಂಪಿ ಯಲ್ಲಿ ಶೇ.50 ಕಮೀಷನ್ ಇದೆ ಎನ್ನುವ ಮಾತಿಗೆ ಇದು ಸಾಕ್ಷಿಯಾದಂತಿದೆ ಎಂದು ಕಿಡಿ ಕಾರಿದರು.
ಈಗಾಗಲೇ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಲ್ಲಿ ಬಿದ್ದು 16 ಜನರು ಸತ್ತಿದ್ದಾರೆ. ಮೈಸೂರಿನಲ್ಲಿ ಸಾವು ನೋವುಗಳು ಸಂಭವಿಸುವ ಮುನ್ನ ಇಲ್ಲಿನ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಿ ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರಚಾರಕ್ಕೆ ಐದಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಇದು ಜನರ ತೆರಿಗೆ ಹಣ ಎನ್ನುವುದು ನೆನಪಿರಲಿ. ಉದ್ಯಮಿಗಳಿಗೆ ನೀವು ನೀಡುವ ಮೂಲಭೂತ ಸೌಕರ್ಯಗಳ ಬಗ್ಗೆ ನಿಮ್ಮ ವೆಬ್ ಸೈಟಿನಲ್ಲಿ ವಿವರಗಳನ್ನು ಹಾಕಿದರೆ ಸಾಕು, ಉದ್ಯಮಿಗಳು ಹುಡುಕಿಕೊಂಡು ಬರಬೇಕು. ಅದನ್ನು ಬಿಟ್ಟು ಪ್ರಚಾರ ಮಾಡಿದರೆ ಯಾವ ಹೂಡಿಕೆದಾರರೂ ಇಲ್ಲಿ ಬರಲಾರರು. ಐಟಿ, ಬಿಟಿ ಕಂಪನಿಗಳು ಬೆಂಗಳೂರಿನಿಂದ ಜಾಗ ಖಾಲಿ ಮಾಡುತ್ತಿವೆ. ಮೊದಲು ಮೂಲಭೂತ ಸೌಕರ್ಯಗಳನ್ನು ಸರಿ ಮಾಡಿ ಎಂದರು.

ಮೈಸೂರಿಗರ ಕಣ್ಣಿಗೆ ಮಣ್ಣೆರೆಚುತ್ತಿರುವ ಪ್ರತಾಪ್ ಸಿಂಹ :

ಕಳೆದ ಒಂದೂವರೆ ವರ್ಷದಿಂದ ಮೈಸೂರಿನಲ್ಲಿ ಸೆಮಿ ಕಂಡಕ್ಟರ್ ಚಿಪ್ ತಯಾರಿಕೆ ಕೇಂದ್ರ ಸ್ಥಾಪನೆ ಮಾಡುವುದಾಗಿ ಸಂಸದ ಪ್ರತಾಪ್ ಸಿಂಹ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ ಎಂದು ಲಕ್ಷ್ಮಣ್ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಪ್ರಾರಂಭಿಸಲು ಉದ್ಧೇಶಿಸಿದ್ದ ಇಂತಹದೇ ಸೆಮಿ ಕಂಡಕ್ಟರ್ ಯೋಜನೆ ಅಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ಗುಜರಾತಿಗೆ ಹೋಗಿದೆ. ಅದೇ ರೀತಿ ಮೈಸೂರಿಗೆ ತರಲು ಉದ್ಧೇಶಿಸಿದ್ದ ಈ ಯೋಜನೆ ಮಧ್ಯಪ್ರದೇಶಕ್ಕೆ ಹೋಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪ್ರತಾಪ್ ಸಿಂಹ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. 
ಕುಸಿಯುತ್ತಿರುವ ಪಾರಂಪರಿಕ ಕಟ್ಟಡಗಳು : 
ಮೈಸೂರಿನಲ್ಲಿ ಈಗಾಗಲೇ 269 ಪಾರಂಪರಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಒಂದೊಂದೇ ಕಟ್ಟಡಗಳು ಕುಸಿಯುತ್ತಿವೆ. ಇದರ ನಿರ್ವಹಣೆಗಾಗಿ ಒಂದು ಇಲಾಖೆಯನ್ನೇ ಸೃಷ್ಟಿ ಮಾಡಿ ಕಚೇರಿಯನ್ನೂ ತೆರೆದು ಅಧಿಕಾರಿಗಳಿಗೆ ಸಂಬಳ ಕೊಟ್ಟು ಇರಿಸಿಕೊಂಡಿದ್ದೀರಿ ಆದರೇ,  ಕಟ್ಟಡ ನಿರ್ವಹಣೆಗೆ ಕನಿಷ್ಠ 5 ರೂಪಾಯಿ ಕೊಟ್ಟಿಲ್ಲ ಎಂದು ಲಕ್ಷ್ಮಣ್ ವ್ಯಂಗ್ಯವಾಡಿದರು. 

ರಾಜ್ಯದಲ್ಲಿ ಸರ್ಕಾರ ಸತ್ತಿದೆ :

ರಾಜ್ಯದಲ್ಲಿ ಸರ್ಕಾರ ಸತ್ತಿದೆ. 8 ಸಚಿವ ಸ್ಥಾನಗಳು ಕಳೆದ ಒಂದೂವರೆ ವರ್ಷದಿಂದ ಖಾಲಿ ಇವೆ. ಮುಖ್ಯಮಂತ್ರಿ ಒಬ್ಬರ ಬಳಿ 12 ಖಾತೆಗಳಿವೆ. ಇದರಲ್ಲಿ ಹಣಕಾಸು, ಡಿಪಿಆರ್, ಕ್ಯಾಬಿನೆಟ್ ಅಫೈರ್ಸ್, ಇಂಟಲಿಜೆನ್ಸ್, ಬಿಡಿಎ, ಆರ್‍ಡಿಪಿಆರ್, ಅರಣ್ಯ ಸೇರಿದಂತೆ ಪ್ರಮುಖ ಖಾತೆಗಳು ಸಿಎಂ ಬಳಿ ಇದ್ದು, ಯಾವ ಖಾತೆಗೂ ಅವರು ನ್ಯಾಯ ಒದಗಿಸುತ್ತಿಲ್ಲ. ಐಎಎಸ್ ಅಧಿಕಾರಿಗಳು ಫೈಲ್ ಹಿಡಿದು ಮುಖ್ಯಮಂತ್ರಿಗಳ ಬಳಿ ಹೋದರೆ, ಇದು ನನ್ನ ವ್ಯಾಪ್ತಿಗೆ ಬರುತ್ತಾ ಎಂದು ಕೇಳುವಷ್ಟರ ಮಟ್ಟಿಗೆ ರಾಜ್ಯಾಡಳಿತ ಕುಸಿದಿದೆ. ಯಾವ ಇಲಾಖೆಯೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಮುಖ್ಯಮಂತ್ರಿಗಳು ಬೆಂಗಳೂರು ಉಸ್ತುವಾರಿ ವಹಿಸಿಕೊಂಡ ಮೇಲೆ ಒಂದು ಸಭೆಯನ್ನೂ ನಡೆಸಿಲ್ಲ. ಮಳೆ ಬಂದರೆ ಇಡೀ ಬೆಂಗಳೂರು ಕೆರೆಯಾಗುತ್ತದೆ. ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಒಂದೆರಡು ಕಟ್ಟಡ ಒಡೆದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿದಿರಿ. ಮುಂದೇನಾಯ್ತು ದಯವಿಟ್ಟು ಹೇಳಿ ಎಂದು ಒತ್ತಾಯಿಸಿದರು. 

ದಸರಾ ಲೆಕ್ಕ ಕೊಡಿ :

ಮೈಸೂರು ದಸರಾ ಹಬ್ಬ ಮುಗಿದು ತಿಂಗಳಾಗುತ್ತಾ ಬಂದರೂ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇನ್ನೂ ದಸರಾ ಖರ್ಚು ವೆಚ್ಚಗಳ ಬಗ್ಗೆ ಜನರಿಗೆ ಲೆಕ್ಕ ನೀಡಿಲ್ಲ. ಸರ್ಕಾರದಿಂದ 35 ಕೋಟಿ ಬಂದಿದೆ. ಸಂಘ, ಸಂಸ್ಥೆಗಳು, ಸಾರ್ವಜನಿಕರು, ಹಲವಾರು ಕಂಪನಿಗಳು ಸಹ ದೇಣಿಗೆ ನೀಡಿದ್ದಾರೆ. ಯುವ ಸಂಭ್ರಮಕ್ಕೆ ಅನಗತ್ಯವಾಗಿ ವೆಚ್ಚ ಮಾಡಲಾಗಿದೆ. ಚಿತ್ರನಟರು ತಮ್ಮ ಚಿತ್ರಗಳ ಪ್ರಚಾರಕ್ಕೆ ವೇದಿಕೆ ಬಳಸಿಕೊಂಡಿದ್ದಾರೆ. ಅಂತದರಲ್ಲೂ ಅವರಿಗೆ ಲಕ್ಷಾಂತರ ಹಣ ನೀಡಿದ್ದೀರಿ. ಕೂಡಲೇ ಇವುಗಳ ಲೆಕ್ಕವನ್ನು ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಮೂರ್ತಿ, ಶಿವಣ್ಣ, ಬಿಎಂ ರಾಮು, ಈಶ್ವರ ಚಕ್ಕಡಿ, ಮಹೇಶ್ ಇದ್ದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು