ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಕರೆ
ಮೈಸೂರು : ಕಬ್ಬಿನ ಎಫ್‍ಆರ್‍ಪಿ ದರ ಪರಿಷ್ಕರಣೆಗೆ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ನೂರಾರು ರೈತರು ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳು ಸೇವೆ ಮಾಡುವ ಮೂಲಕ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಗುರುವಾರ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಆರ್.ಎಂ.ಸಿ. ಬಳಿಯ ರಿಂಗ್ ರಸ್ತೆಯಲ್ಲಿ ರೈತರು ರಸ್ತೆ ತಡೆ ನಡೆಸಿ ಉರುಳು ಸೇವೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುರುಬೂರು ಶಾಂತಕುಮಾರ್ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಎಫ್.ಆರ್.ಪಿ. ದರಕ್ಕೆ ಹೆಚ್ಚುವರಿ ದರ ನೀಡುವಲ್ಲಿ ವಿಫಲವಾಗಿವೆ. ಹೆಚ್ಚುವರಿ ದರ ನಿಗದಿಪಡಿಸಲು ಸಕ್ಕರೆ ಮಂತ್ರಿಗಳ ನೇತೃತ್ವದಲ್ಲಿ ನಾಲ್ಕು ಸಭೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ ಇದು ಕಬ್ಬು ಬೆಳೆದ ರೈತರಿಗೆ ಬಗೆದ ದ್ರೋಹವಾಗಿದೆ. ರಾಜ್ಯದ ಕಬ್ಬು ಬೆಳೆಗಾರರು, ರೈತರು ಕಳೆದ ನಾಲ್ಕು ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಶಾಸಕ, ಸಂಸದ, ಸಚಿವರೂ ರೈತರ ಪರವಾಗಿ ಮಾತನಾಡದೆ ಮೌನವಾಗಿರುವುದು ಅನುಮಾನ ಹುಟ್ಟು ಹಾಕಿದೆ ಎಂದು ಹೇಳಿದರು.
ಕಬ್ಬು ಎಫ್.ಆರ್.ಪಿ ದರವನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ದರ ನಿಗದಿ ಪಡಿಸಲಾಗಿದೆ. ನಮ್ಮ ರಾಜ್ಯದ ಸಕ್ಕರೆ ಕಾರ್ಖಾನೆಗಳು ಸೂಕ್ತ ದರವನ್ನು ನೀಡದೆ ರೈತರನ್ನು ವಂಚಿಸುತ್ತಿವೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಸಕ್ಕರೆ ಕಂಪನಿಗಳ ಜತೆ ಶಾಮೀಲಾಗಿದ್ದಾರೆ ಎಂದು ಕಿಡಿಕಾರಿದರು.
ಆಹಾರ ಇಲಾಖೆ ಅಧಿಕಾರಗಳಿಗೆ ತರಾಟೆ:
ಕಬ್ಬು ದರ ನಿಗದಿಗೊಳಿಸುವಂತೆ ಒತ್ತಾಯಿಸಿ ಗುರುವಾರ ರೈತರು ಬೆಳಿಗ್ಗೆ 11 ಗಂಟೆಯಿಂದ ರಸ್ತೆ ತಡೆ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಆಹಾರ ಇಲಾಖೆ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನೀವು ಆಹಾರ ಇಲಾಖೆ ಉಪನಿರ್ದೇಶಕರಾಗಿರದ ಮೇಲೆ ಯಾಕೆ ಇಲ್ಲಿಗೆ ಬಂದಿರಿ ಎಂದು ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಮಗೆ ಸರ್ಕಾರ ಸಂಬಳ ಕೊಡುತ್ತಿರುವುದು ರೈತರ ತೆರಿಗೆಯಿಂದ, ಬಣ್ಣಾರಿ ಸಕ್ಕರೆ ಕಾರ್ಖನೆಯವರು ಕಳೆದ ಬಾರಿ ಟನ್ ಕಬ್ಬಿಗೆ 2,800 ರೂ ನೀಡಿ ಈ ಬಾರಿ 2,500 ರೂ. ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅವರು ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ ಎಂದು ಹೇಳಿದ್ದಾರೆ. ನೀವು ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಉತ್ತರ ನೀಡದ ಅಧಿಕಾರಗಳ ವಿರುದ್ಧ ಕುರುಬೂರು ಶಾಂತಕುಮಾರ್ ಗರಂ ಆದರು.
ನೀವು ಸರ್ಕಾರಿ ಸೇವಕರು ನಿಮ್ಮ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡಿ ಒಂದು ತಿಂಗಳು ನಿಮಗೆ ಸಂಬಳ ಬರದಿದ್ದರೆ ತಡ ಬಡಾಯಿಸುತ್ತೀರಿ, ರೈತ 12 ತಿಂಗಳು ಕಷ್ಟಪಟ್ಟು ಕಬ್ಬು ಬೆಳೆಯುತ್ತಾನೆ ಅವನಿಗೆ ಸರಿಯಾದ ದರ ಸಿಗದಿದ್ದರೆ ಏನು ಮಾಡುವುದು. ನೀವು ರೈತರ ಸಮಾಧಿ ಮೇಲೆ ನೀರು ಸುರಿಯಲು ಬರುತ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
0 ಕಾಮೆಂಟ್‌ಗಳು