ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಎಸ್‍ಡಿಪಿಐ ಸ್ಪರ್ಧೆ ಖಚಿತ : ಪಕ್ಷ ಸಂಘಟನೆ ಬಲವಾಗಿಸಲು ಕಾರ್ಯಕರ್ತರಿಗೆ ಕರೆ

ಚುನಾವಣಾ ಪೂರ್ವ ಕಾರ್ಯಕರ್ತರ ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಸೂಚನೆ

ಮಂಡ್ಯ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಎಸ್‍ಡಿಪಿಐ ಅಭ್ಯರ್ಥಿ ಸ್ಪರ್ಧಿಸುವುದು ಖಚಿತವಾಗಿದ್ದು, ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ತಿಳಿಸಿದರು.
ನಗರದ ಗುತ್ತಲು ರಸ್ತೆಯ ಸನಾಖಾನ್ ಸಭಾ ಭವನದಲ್ಲಿ ನಡೆದ ಜಿಲ್ಲೆಯ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಂವಿಧಾನದ ಮೂಲ ಆಶಯಗಳು ಈಡೇರಿಲ್ಲ. ಇದಕ್ಕೆ ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳ ವೈಫಲ್ಯವೇ ಕಾರಣ. ಆದಾಗ್ಯೂ ಮತದಾರರು ಪದೇ ಪದೇ ಇದೇ ಪಕ್ಷಗಳಿಗೆ ಮಣೆ ಹಾಕುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಕೆಲವು ಮತದಾರರಂತೂ ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆಯನ್ನೇ ಕಳೆದುಕೊಂಡಿರುವುದು ಸಹ ಆತಂಕಕ್ಕೆ ಕಾರಣವಾಗಿದೆ. ಇದರಿಂದ ದೇಶದ ಪ್ರಜಾತಂತ್ರ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
 ಈ ಸಂದರ್ಭದಲ್ಲಿ ಸಂವಿಧಾನದ ನೈಜ ಆಶಯಗಳ ಈಡೇರಿಸುವಿಕೆ, ಭಯ ಮತ್ತು ಹಸಿವು ಮುಕ್ತ ಸಮಾಜವನ್ನು ಕಟ್ಟುವುದೇ ತನ್ನ ಧ್ಯೇಯ ಮತ್ತು ಸಿದ್ಧಾಂತವನ್ನಾಗಿಸಿ ಕೊಂಡಿರುವ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜನತೆಯ ಮುಂದೆ ನೈಜ ಪರ್ಯಾಯವಾಗಿ ಬಿಂಬಿಸುವ ಹಾಗೂ ಜಾಗೃತಿಗೊಳಿಸುವ ಮತ್ತು ಈ ಚುನಾವಣಾ ವರ್ಷದಲ್ಲಿ ಪಕ್ಷವನ್ನು ಸದೃಢವಾಗಿಸುವ ಮಹತ್ತರ ಹೊಣೆಗಾರಿಕೆಯು ಪಕ್ಷದ ಪ್ರತಿಯೊಬ್ಬ ನಾಯಕರು ಹಾಗೂ ಕಾರ್ಯಕರ್ತರ ಮೇಲಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಠಿಣ ಪರಿಶ್ರಮದ ಮೂಲಕ ಈ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಅವರು ಕರೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಸಾದತ್ ಪಾಷ, ಉಪಾಧ್ಯಕ್ಷ ಆರ್.ಕೆ.ರಹೀಮ್, ಜಿಲ್ಲಾ ಕಾರ್ಯದರ್ಶಿ ಅತೀಖ್ ಅಹಮದ್ ಸೇರಿದಂತೆ ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು