ಅಪಘಾತದಲ್ಲಿ ಗಾಯಗೊಂಡಿದ್ದ ದರಸಗುಪ್ಪೆ ಇಡ್ಲಿ ಶಿವಪ್ಪ ನಿಧನ

ಇಂದು ಮದ್ಯಾಹ್ನ ದರಸಗುಪ್ಪೆ ಗ್ರಾಮದ ಬಳಿ ಅಂತ್ಯಕ್ರಿಯೆ

ವರದಿ-ನಜೀರ್ ಅಹಮದ್, ಮೈಸೂರು

ಶ್ರೀರಂಗಪಟ್ಟಣ : ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರಖ್ಯಾತ ಇಡ್ಲಿ ಹೋಟೆಲ್ ಮಾಲೀಕ ತಾಲೂಕಿನ ದರಸಗುಪ್ಪೆ ಗ್ರಾಮದ ಇಡ್ಲಿ ಶಿವಪ್ಪ ಇಂದು ನಿಧನರಾಗಿದ್ದಾರೆ.
ಶಿವಪ್ಪ ಸ್ಕೂಟರ್‍ನಲ್ಲಿ ತಮ್ಮ ಸ್ವಂತ ಊರಾದ ರಾಮನಗರಕ್ಕೆ ಹೋಗುತ್ತಿದ್ದಾಗ ರಸ್ತೆ ಮಧ್ಯೆ ನಾಯಿ ಅಡ್ಡಬಂದು ಸ್ಕೂಟರ್‍ನಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಕರೆತರಲಾಗಿತ್ತು. ಗುರುವಾರ ಮಧ್ಯರಾತ್ರಿ ತೀವ್ರ ನೋವಿನಿಂದ ನರಳುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರ ಮಗ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಅವರು ಮೃತಪಟ್ಟರು ಎನ್ನಲಾಗಿದೆ.
ಶಿವಪ್ಪ ಅವರ ಅಂತ್ಯಕ್ರಿಯೆ ದರಸಗುಪ್ಪೆ ಗ್ರಾಮದ ಬಳಿ ನಡೆಯಲಿದೆ. ಮೃತರು ಪತ್ನಿ ಮತ್ತು ಒರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಮತ್ತು ಸಾವಿರಾರು ಇಡ್ಲಿ ಪ್ರಿಯರನ್ನು ಅಗಲಿದ್ದಾರೆ.
ಮೂಲತಃ ರಾಮನಗರ ತಾಲ್ಲೂಕಿನವರಾದ ಶಿವಪ್ಪ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ದರಸಗುಪ್ಪೆ ಗ್ರಾಮದಲ್ಲಿ ನೆಲೆಸಿದ್ದರು. ಚಾಮರಾಜನಗರ ಬೀದರ್ ರಾಷ್ಟ್ರೀಯ ಹೆದ್ದಾರಿ ಬಾಜುವಿನಲ್ಲಿದ್ದ ತಮ್ಮ ಮನೆಯಲ್ಲಿಯೇ ಜೀವನೋಪಾಯಕ್ಕೆ ಸಣ್ಣ ಟಿ ಅಂಗಡಿ ಪ್ರಾರಂಭಿಸಿದರು. ಶುಚಿ ಮತ್ತು ರುಚಿಗೆ ಖ್ಯಾತರಾಗಿದ್ದ ಶಿವಪ್ಪ ಅವರ ಹೋಟೆಲ್‍ನಲ್ಲಿ ಟೀ ಕುಡಿಯಲು ಜನ ತಂಡ ತಂಡವಾಗಿ ಆಗಮಿಸುತ್ತಿದ್ದರು. ನಂತರ ಸಣ್ಣದಾಗಿ ಬೆಳಗಿನ ಉಪಹಾರ ಇಡ್ಲಿ ಮಾರಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆಯೇ ಅವರ ಇಡ್ಲಿ ಜನಪ್ರಿಯವಾಗಿ. ನಂತರ ಗಂಟೆ ಗಟ್ಟಲೇ ಇಡ್ಲಿಗಾಗಿ ಜನ ಕಾಯುವಂತಾಯಿತು.
ಸುಮಾರು ಮೂರು ದಶಕಗಳಷ್ಟು ಹಳೆಯದಾದ ಈ ಸಣ್ಣ ಹೋಟೆಲ್ ಕರೋನಾ ಸಂದರ್ಭದಲ್ಲೂ ಗಟ್ಟಿಯಾಗಿ ನಿಂತಿತ್ತು. ಮೈಸೂರಿನಿಂದ ಕೇವಲ 20 ಕಿಮೀ ದೂರದಲ್ಲಿರುವ ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಈ ಪುಟ್ಟ ಹೋಟೆಲ್ ದಕ್ಷಿಣ ಭಾರತೀಯರ ಮೆಚ್ಚಿನ ಉಪಹಾರವಾದ ಮೃದುವಾದ ಇಡ್ಲಿಗಳಿಗೆ ಹೆಸರು ವಾಸಿಯಾಗಿದೆ. ಶಿವಪ್ಪ ನಡೆಸುತ್ತಿರುವ ಈ ಹೋಟೆಲ್‍ಗೆ ಮೈಸೂರು, ಮಂಡ್ಯ, ಬೆಂಗಳೂರಿನಿಂದ ಇಡ್ಲಿ ಪ್ರಿಯರು ಆಗಮಿಸುತ್ತಾರೆ. ಅವರು ಪ್ರತಿದಿನ ಬೆಳಿಗ್ಗೆ 7.15 ಕ್ಕೆ ತೆರೆದು 10 ಗಂಟೆಗೆ ಮುಚ್ಚುತ್ತಾರೆ. ಅವರ ಗ್ರಾಹಕರು ತಮ್ಮ ಸರದಿಗಾಗಿ 40-45 ನಿಮಿಷಗಳ ಕಾಲ ಕಾಯಲು ಮನಸ್ಸಿಲ್ಲವಾದರೂ ಇಡ್ಲಿ ತಿನ್ನಬೇಕೆಂದರೇ ಕಾಯಲೇ ಬೇಕಿತ್ತು. 
ದಿನವೊಂದಕ್ಕೆ ಸುಮಾರು 10ರಿಂದ 20 ಸಾವಿರ ರೂ.ವರೆಗೆ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ. ಅನೇಕ ಇಡ್ಲಿ ಪ್ರಿಯರು ಒಂದು ದಿನ ಮುಂಚಿತವಾಗಿ ಕರೆ ಮಾಡಿ ಬರುವುದಾಗಿ ಹೇಳುತ್ತಿದ್ದರು. ವಿಶಿಷ್ಟ ಮೃದುತ್ವ ಮತ್ತು ರುಚಿಕರವಾದ ಬೆಣ್ಣೆ ಮತ್ತು ಚಟ್ನಿಯಿಂದಾಗಿ ಗ್ರಾಹಕರು ಅವರ ಇಡ್ಲಿಗಳನ್ನು ಇಷ್ಟಪಡುತ್ತಾರೆ. ಮನೆಯವರು ಮಾತ್ರ ಪ್ರತಿದಿನ ಇಡ್ಲಿ ಹಿಟ್ಟನ್ನು ತಯಾರಿಸುತ್ತಾರೆ ಮತ್ತು ಹೋಟೆಲ್ ಕೇವಲ ಮೂರು ಗಂಟೆಗಳ ಕಾಲ ತೆರೆಯುತ್ತದೆ. ಪ್ರಸಿದ್ಧ ಚಿತ್ರನಟರು, ಉದ್ಯಮಿಗಳು, ರಾಜಕಾರಣಿಗಳು, ಅಧಿಕಾರಿಗಳು ಶಿವಪ್ಪ ಅವರ ಗ್ರಾಹಕರಾಗಿದ್ದರು. ಕೆಲವು ನಟರಂತೂ ತಮ್ಮ ಕಾರಿನಲ್ಲಿ ಕುಳಿತು ಇಡ್ಲಿ ತಿಂದು ಹೋಗುತ್ತಿದ್ದರು. ಮಿತ ಭಾಷಿಯಾಗಿದ್ದ ಶಿವಪ್ಪ ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ. ಮೊದಲು ಬಂದವರಿಗೆ ಮೊದಲು ಇಡ್ಲಿ ನೀಡುವ ಕ್ರಮ ಬೆಳೆಸಿಕೊಂಡಿದ್ದರು. 




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು