ಹನೂರು : ಅಂಗಡಿಗಳ ಮೇಲೆ ಜೆಸಿಬಿ ಹರಿದ ಪ್ರಕರಣ : ಕೆಶಿಪ್ ಅಧಿಕಾರಿಗಳ ವಿರುದ್ಧ ಜನಾಕ್ರೋಶ

ಅವಧಿ ಮುಗಿಯುವ ತನಕ ಅವಕಾಶ, ಇಲ್ಲವೇ ಅಡ್ವಾನ್ಸ್ ಹಣ ವಾಪಸ್ ಕೊಡುವಂತೆ ಒತ್ತಾಯ

ವರದಿ-ಶಾರುಕ್ ಖಾನ್, ಹನೂರು 

ಹನೂರು : ಪಟ್ಟಣದ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಹಲವಾರು ಅಂಗಡಿ ಮಳಿಗೆಗಳ ಮೇಲೆ ಶನಿವಾರ ಸಂಜೆ ಏಕಾಏಕಿ ಕೆಶಿಪ್ ಅಧಿಕಾರಿಗಳು ಜೆಸಿಬಿ ಹರಿಸಿದ ಪ್ರಕರಣಕ್ಕೆ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ.
ಅಂಗಡಿ ಮಳಿಗೆಗಳನ್ನು ಹನೂರು ಪಟ್ಟಣ ಪಂಚಾಯ್ತಿಯಿಂದ 6.30 ಲಕ್ಷ ರೂ. ಹಣ ಪಾವತಿಸಿ 25 ವರ್ಷಗಳ ಲೀಸ್ ಪಡೆಯಲಾಗಿದೆ. ಅವಧಿ ಮುಗಿಯಲು ಇನ್ನೂ 9 ವರ್ಷ ಬಾಕಿ ಇದೆ. ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಹರ್ಷ ಗುಪ್ತಾ ಅವರೇ ಅಗ್ರಿಮೆಂಟ್‍ಗೆ ಸಹಿ ಹಾಕಿದ್ದಾರೆ. ಅಂಗಡಿಯವರು ಇಲ್ಲಿನ ವ್ಯಾಪಾರವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಬ್ಯಾಂಕ್ ಮತ್ತಿತರ ಕಡೆ ಸಾಲ ಮಾಡಿಕೊಂಡಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಅಂಗಡಿ ಖಾಲಿ ಮಾಡಿ ಎಂದರೆ ಎಲ್ಲಿ ಹೋಗುವುದು ಎನ್ನುವುದು ಅಂಗಡಿ ಮಾಲಿಕರ ಅಳಲು. 

ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿಗಳು ಅಡ್ವಾನ್ಸ್ ಹಣ ವಾಪಸ್ ಕೊಟ್ಟ 10 ದಿನಗಳ ಬಳಿಕ ಅಂಗಡಿ ಖಾಲಿ ಮಾಡಿ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎದುರು ಹೇಳಿದ್ದರೂ ನಮ್ಮ ಹಣ ವಾಪಸ್ ಕೊಡುತ್ತಿಲ್ಲ.
ಇನ್ನೂ ಕೆಶಿಪ್ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮ ಮೇಲೆ ಧಮಕಿ ಹಾಕಿ ಹೊಡೆಯಲು ಬರುತ್ತಾರೆ ಎಂದು ಅಂಗಡಿ ಮಾಲಿಕ ಗೋಪಾಲ ನಾಯ್ಡು ವಿವರಿಸಿದರು. 
ಒಟ್ಟಾರೆ ಸಾಲಸೋಲ ಮಾಡಿ ಪಟ್ಟಣ ಪಂಚಾಯ್ತಿಗೆ ಹಣ ಕೊಟ್ಟು ಕಾನೂನು ಬದ್ಧವಾಗಿ ಅಂಗಡಿ ನಡೆಸುತ್ತಿರುವವರ ವಿರುದ್ಧ ಈ ರೀತಿ ನಿರ್ದಾಕ್ಷೀಣ್ಯ ಕ್ರಮಕ್ಕೆ ಮುಂದಾಗುವುದು ತಪ್ಪು. ರಸ್ತೆ ಅಗಲೀಕರಣಕ್ಕೂ ನಮ್ಮ ಸಮ್ಮತಿ ಇದೆ. ಮೊದಲು ಇವರಿಗೆ ನ್ಯಾಯ ಒದಗಿಸಿ, ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಅಂಗಡಿ ಖಾಲಿ ಮಾಡಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು