ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಕುತಂತ್ರ, ಕುಮಾರಸ್ವಾಮಿ ಅನೈತಿಕ ರಾಜಕೀಯ ಕಾರಣ : ನಳೀನ್ ಕುಮಾರ್ ಕಟೀಲ್

 ಮೈಸೂರು : 2018ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸಿದ್ದರಾಮಯ್ಯ ಕುತಂತ್ರದಿಂದ ಕುಮಾರ ಸ್ವಾಮಿ ಅನೈತಿಕ ಮಾರ್ಗದಿಂದ ಮುಖ್ಯಮಂತ್ರಿಯಾದರು. ಆದರೆ, ಹೆಚ್‍ಡಿಕೆ ದುರಾಡಳಿತದಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸೇರಿದಂತೆ 17 ಶಾಸಕರು ಬಿಜೆಪಿ ಜತೆ ಕೈ ಜೋಡಿಸಿದ್ದರಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. 
ನಗರದ ಬೂತಾಳ ಆಟದ ಮೈದಾನದಲ್ಲಿ ಬಿಜೆಪಿ ವತಿಯಿಂದ ಆಯೋಜಿದ್ದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಆಗ ಮುಖ್ಯಮಂತ್ರಿಯಾದ ಕುಮಾರಸ್ವಾಮಿ, ಬೇರೆ ಪಕ್ಷದ ಶಾಸಕರಿಗಿರಲಿ, ತಮ್ಮದೇ ಪಕ್ಷದ ಶಾಸಕರ ಕೈಗೆ ಸಿಗುತ್ತಿರಲಿಲ್ಲ ಎಂದು ಟೀಕಿಸಿದರು. 
ಸಿದ್ದರಾಮಯ್ಯ ಅವರು 2013 ರ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿಹೋಗುತ್ತದೆ ಎಂಬ ಉದ್ದೇಶದಿಂದ ಒಳ ಒಪ್ಪಂದ ಮಾಡಿಕೊಂಡು ದಲಿತ ನಾಯಕ ಡಾ.ಜಿ.ಪರಮೇಶ್ವರ್ ಚುನಾವಣೆಯಲ್ಲಿ ಸೋಲುವಂತೆ ಮಾಡಿದರು. ಹೀಗಾಗಿ ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ  ಲಭಿಸಬೇಕಾಗಿದ್ದ ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ಕುತಂತ್ರದ ರಾಜಕಾರಣದ ಮೂಲಕ ತಾವು ದೊರಕಿಸಿಕೊಳ್ಳುವಲ್ಲಿ ಸಿದ್ದರಾಮಣ್ಣ ಯಶಸ್ವಿಯಾದರು ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮುಖ್ಯಂತ್ರಿ ಆಗಿದ್ದಾಗ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡರು. ಮೈಸೂರು, ಮಂಗಳೂರು, ಉಡುಪಿ ಸೇರಿದಂತೆ ಅನೇಕ  ಹಿಂದೂ ಕಾರ್ಯಕರ್ತರು ಹತ್ಯೆಯಾದಾಗ ಅವರು ಮೃತರಾದ ಯಾವೊಬ್ಬ ಹಿಂದೂ ಕಾರ್ಯಕರ್ತನ ಮನೆಗೆ ತೆರಳಿ ಪರಿಹಾರವಿರಲಿ ಒಂದು ಸಾಂತ್ವಾನದ ಮಾತುಗಳನ್ನೂ ಹೇಳಲಿಲ್ಲ. ಬದಲಾಗಿ ಸುಮಾರು ಎರಡು ಸಾವಿರಕ್ಕೂ ಅಧಿಕ ನಿμÉೀಧಿತ ಪಿಎಫ್‍ಐ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದರು ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯಿಂದ ದೇಶದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅವರ ತಾತಾ(ನೆಹರು) ಅವರ ಆಡಳಿತ ಅವಧಿಯಲ್ಲಿ ಭಾರತದಿಂದ ಬೇರ್ಪಡೆಗೊಂಡ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳನ್ನು ಜೋಡಿಸಲಿ ಎಂದು ಟೀಕಿಸಿದರು.
ಮುಂದಿನ ವರ್ಷದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯಾದ್ಯಾಂತ 150 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಕಮಲವನ್ನು ಅರಳಿಸುವ ಗುರಿ ಇಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದ ಪ್ರತಿಯೊಂದು ಕ್ಷೇತ್ರಗಳಲ್ಲಿ ಸಂಚರಿಸುತ್ತಾ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಬಿ.ಶ್ರಿವತ್ಸ,  ಬಿಜೆಪಿ ರಾಜ್ಯ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ರೂಪ, ಮುಖಂಡರಾದ ತೋಂಟದಾರ್ಯ, ಮೈ.ವಿ. ರವಿಶಂಕರ್, ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ವಡಿವೇಲ್ ಇತರರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು