ಸತ್ತವರ ಹೂಳಲು ಸ್ಮಶಾನವಿಲ್ಲ, ಹಳ್ಳ ದಾಟಲು ಸೇತುವೆಯೂ ಇಲ್ಲ
ಮತದಾನ ಬಹಿಷ್ಕಾರ ಎಚ್ಚರಿಕೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ಶನಿವಾರ ಮೃತಪಟ್ಟ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ನಡೆಸಲು ಸ್ಮಶಾನವಿಲ್ಲದ ಕಾರಣ ರಭಸವಾಗಿ ಹರಿಯುವ ಹಳ್ಳದ ದಡದಲ್ಲಿಯೇ ಹೆಣ ಹೂಳಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮೃತ ಮಹಿಳೆ ಪಳನಿಯಮ್ಮ ಆದಿ ಜಾಂಭವ ಸಮುದಾಯಕ್ಕೆ ಸೇರಿದ್ದು, ಸ್ವಂತ ಜಮೀನು ಇಲ್ಲದ ಕಾರಣ ಆಕೆಯ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ತರು ಪರದಾಡಿದರು. ಈ ನಡುವೆ ಶಾಸಕ ಆರ್.ನರೇಂದ್ರ ವಿರುದ್ಧ ಜನಾಕ್ರೋಶ ವ್ಯಕ್ತವಾಯಿತು.
ಇತ್ತೀಚೆಗೆ ಈ ಭಾಗಗಳಲ್ಲಿ ಹೆಚ್ಚು ಮಳೆಯಾದ ಕಾರಣ ಉಡುತೊರೆ ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಹಳ್ಳ ದಾಟಲು ಸೇತುವೆಯೂ ಇಲ್ಲದ ಕಾರಣ ಜನರೇ ಹೆಣ ಹೊತ್ತು ಅಪಾಯಕಾರಿ ಹಳ್ಳವನ್ನು ದಾಟಿ ಹಳ್ಳದ ದಡದಲ್ಲೇ ಹೆಣ ಹೂಳಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾರ್ವಜನಿಕರಿಂದ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವುದು ಕಂಡು ಬಂದಿದೆ.
ವಿಧಾನಸಭಾ ಚುನಾವಣೆಗೂ ಮುನ್ನ ಗ್ರಾಮಕ್ಕೆ ಸ್ಮಶಾನ ನೀಡದಿದ್ದರೆ
ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದರು.
ಗ್ರಾಮದ ಹಿರಿಯ ಮಹಿಳೆ ಪಾಪಮ್ಮ ಮಾತನಾಡಿ, ಜನ ಪ್ರತಿನಿಧಿಗಳು ಚುನಾವಣೆ ಸಂದರ್ಭಗಳಲ್ಲಿ ಮಾತ್ರ ನಮ್ಮ ಗ್ರಾಮಕ್ಕೆ ಬಂದು ಇಲ್ಲ ಸಲ್ಲದ ಆಸೆ, ಆಮೀಷಗಳನ್ನು ನೀಡಿ ನಮ್ಮ ವೋಟು ಪಡೆದುಕೊಳ್ಳುತ್ತಾರೆ. ನಂತರ ಇತ್ತ ತಲೆಯೂ ಹಾಕುವುದಿಲ್ಲ. ನಮ್ಮೂರಿನಲ್ಲಿ ಸ್ಮಶಾನ ಇಲ್ಲ ಎಂದು ನಮ್ಮ ಶಾಸಕರ ಗಮನಕ್ಕೆ ತಂದಿದ್ದೇವೆ ಆದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ನಮಗೆ ಒಂದು ಹೊತ್ತು ಊಟ ಇಲ್ಲದಿದ್ದರೂ ಪರವಾಗಿಲ್ಲ ಮಾದಿಗ ಜನಾಂಗಕ್ಕೆ ಸ್ಮಶಾನ ಬೇಕು ಎಂದು ಒತ್ತಾಯ ಮಾಡಿದರು.
ಮುಂದುವರಿದು ಮಾತನಾಡಿದ ಅವರು, `ನನ್ನ 25 ವರ್ಷದ ಮಗ ಷಣ್ಮುಖ ತೀರಿಕೊಂಡಾಗ ನಾವು ಹಳ್ಳದ ಪಕ್ಕದಲ್ಲಿ ನೀರಿನಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದೆವು. ಹಳ್ಳದಲ್ಲಿ ನೀರು ಹೆಚ್ಚಾಗಿದ್ದ ಕಾರಣ ಅದರ ರಬಸಕ್ಕೆ ಹೆಣವನ್ನು ಹೊತ್ತುಕೊಂಡು ಹಳ್ಳ ದಾಟಿ ಅಂತ್ಯಸಂಸ್ಕಾರ ನಡೆಸಿದೆವು. ಸತತವಾಗಿ ಮಳೆ ಹೆಚ್ಚಾಗಿ ಹಳ್ಳದ ನೀರು ದಡವನ್ನು ಕೊಚ್ಚಿದಾಗ ನೀರಿನ ರಭಸಕ್ಕೆ ನನ್ನ ಮಗನ ಶವ ಕೊಚ್ಚಿ ಹೋಯಿತು ಎಂದು ನೋವಿನಿಂದ ಹೇಳಿದರು.
ಹಳ್ಳದ ಪಕ್ಕದಲ್ಲಿ ಸರ್ಕಾರಿ ಜಮೀನು ಇದ್ದು, ಅದೆಲ್ಲವನ್ನೂ ಬಾಜೂದಾರರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವು ಮಾಡಿಸಿದರೆ ಒಂದಷ್ಟು ಅನುಕೂಲವಾಗುತ್ತದೆ. ಶಾಸಕರು, ಸದಸ್ಯರು ಚುನಾವಣೆ ಬಂದಾಗ ಮಾತ್ರ ಗ್ರಾಮಕ್ಕೆ ಬರುತ್ತಾರೆ. ಅμÉ್ಟೀ ಹೊರತು ಬೇರೆ ಯಾವುದೇ ಸಂದರ್ಭದಲ್ಲಿ ತಿರುಗಿ ಸಹ ನೋಡುವುದಿಲ್ಲ. ನಮ್ಮ ಕಾಲದಲ್ಲಿ ಹೀಗೆ, ಇನ್ನು ನಮ್ಮ ಮೊಮ್ಮಕ್ಕಳ ಕಾಲಕ್ಕೆ ಇನ್ಯಾವ ಪರಿಸ್ಥಿತಿ ಇರುತ್ತದೆಯೋ ಎಂದರು.
ಶೀಘ್ರದಲ್ಲೆ ಸ್ಮಶಾನ ಮಂಜೂರು
ಈಗಾಗಲೇ ಸರ್ಕಾರಿ ಜಮೀನು ಗೊತ್ತು ಮಾಡಲಾಗಿದ್ದು, ಸರ್ವೇ ವರದಿ ಹಾಗೂ ಆರ್.ಐ. ವರದಿಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಆದಷ್ಟು ಬೇಗ ಸ್ಮಶಾನಕ್ಕೆ ಜಮೀನು ಒದಗಿಸುವ ಕ್ರಮ ಕೈಗೊಳ್ಳಲಾಗುವುದು.-ಆನಂದಯ್ಯ, ತಹಶೀಲ್ದಾರ್
0 ಕಾಮೆಂಟ್‌ಗಳು