ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಅಂಗಡಿಗಳ ಮೇಲೆ ಜೆಸಿಬಿ ಹರಿಸಿದ ಕೆಶಿಪ್ ಅಧಿಕಾರಿಗಳು

ವರದಿ-ಶಾರುಕ್ ಖಾನ್, ಹನೂರು 

ಹನೂರು : ಪಟ್ಟಣದ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಹಲವಾರು ಅಂಗಡಿ ಮಳಿಗೆಗಳ ಮೇಲೆ ಕೆಶಿಪ್ ಅಧಿಕಾರಿಗಳು ಜೆಸಿಬಿ ಹರಿಸಿ ತೆರವು ಮಾಡಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಕೊಳ್ಳೇಗಾಲದಿಂದ ಹನೂರಿನವರೆಗೆ 23 ಕಿ.ಮೀ ರಸ್ತೆ ಅಭಿವೃದ್ಧಿಗೆ 108 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ಅಗಲಿಕರಣ ಕಾಮಗಾರಿಯನ್ನೂ ಕೆಲ ದಿನಗಳ ಹಿಂದೆ ಪ್ರಾರಂಭಿಸಿ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಅಂಗಡಿ ಮಾಲೀಕರಿಗೆ ತೆರವು ನೋಟೀಸ್ ನೀಡಿದ್ದರೂ ಕೆಲವರು ತಮ್ಮ ಅಂಗಡಿಗಳ ತೆರವಿಗೆ ಮುಂದಾಗದ ಕಾರಣ ಕೆಶಿಪ್ ಅಧಿಕಾರಿಗಳು ಇಂದು ನಿರ್ಧಾಕ್ಷೀಣ್ಯ ಕ್ರಮಕ್ಕೆ ಮುಂದಾದರು.

ಪಟ್ಟಣದ ಸರ್ಕಾರಿ ಕಟ್ಟಡಗಳಲ್ಲಿ ಬಾಡಿಗೆಗೆ ಇದ್ದ ಅಂಗಡಿ ಮಳಿಗೆಗಳನ್ನು ಖಾಲಿ ಮಾಡುವಂತೆ ನೋಟೀಸ್ ನೀಡಲಾಗಿತ್ತು. ಆದರೆ, ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಅಂಗಡಿ ಖಾಲಿ ಮಾಡುವುದಿಲ್ಲ ಎಂದು ಅಂಗಡಿ ಮಾಲಿಕರು ಹಠಮಾರಿ ಧೋರಣೆ ತೋರಿದ್ದ ಕಾರಣ
ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಅಪಸ್ವರ ಬಂದ ಕಾರಣ 
ಕೆಶಿಪ್ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಇಂದು ಸಂಜೆ ಅಧಿಕಾರಿಗಳು ಜೆಸಿಬಿ ಯಂತ್ರಗಳ ಮೂಲಕ ಅಂಗಡಿ ಮಳಿಗೆಗಳ ಮುಂದೆ ಹಾಕಲಾಗಿದ್ದ ಶೀಟ್‍ಗಳನ್ನು ತೆರವು ಮಾಡಿದರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಮೂಡಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು