ಮೈಸೂರು ಮೇಲ್.ಕಾಂ ವರದಿ ಫಲಶ್ರುತಿ : ಕಂದಾಯ ಇಲಾಖೆಯಿಂದ ಸ್ಮಶಾನಕ್ಕಾಗಿ ಸರ್ಕಾರಿ ಭೂಮಿ ನಿಗದಿ

 ಹುತ್ತೂರು ಸರ್ವೆ ನಂಬರ್ 15 ಹಾಗೂ 16ರ ಜಮೀನು ಸ್ಮಶಾನಕ್ಕೆ ನೀಡುವ ಸಂಭವ 

ವರದಿ-ಶಾರುಕ್ ಖಾನ್, ಹನೂರು

ಹನೂರು : ತಾಲ್ಲೂಕಿನ ವಿಎಸ್ ದೂಡ್ಡಿ ಗ್ರಾಮದಲ್ಲಿ ಸ್ವಂತ ಜಮೀನಿಲ್ಲದ ಮೃತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಕುಟುಂಬದವರು ಪರದಾಡಿದ್ದು, ಕೊನೆಗೆ ವ್ಯಕ್ತಿಯೊಬ್ಬರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಜೋಳ ಕಟಾವು ಮಾಡಿ ಅಂತ್ಯ ಸಂಸ್ಕಾರ ನಡೆಸಲು ಅನುವು ಮಾಡಿಕೊಟ್ಟ ಘಟನೆ ಮೈಸೂರು ಮೇಲ್.ಕಾಂ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸ್ಮಶಾನಕ್ಕಾಗಿ ಸರ್ಕಾರಿ ಭೂಮಿಯ ಹುಡುಕಾಟ ನಡೆಸಿದರು.

ತಹಸೀಲ್ದಾರ್ ಆನಂದಯ್ಯ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಮಶಾನಕ್ಕೆ ಸೂಕ್ತ ಸ್ಥಳವನ್ನು ಪರಿಶೀಲಿಸಿದ್ದಾರೆ.

ಸಮೀಪದ ಹುತ್ತೂರು ಸರ್ವೆ ನಂಬರ್ 15 ಹಾಗೂ 16ರ ಸರ್ಕಾರಿ ಜಮೀನನ್ನು ಸ್ಮಶಾನಕ್ಕೆ ಗುರುತಿಸಲಾಗಿದ್ದು, ಕಂದಾಯ ಇಲಾಖೆಯ ದಾಖಲೆ ಸರ್ವೆ ದಾಖಲೆಗಳನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಇನ್ನೆರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ರಾಜಸ್ವ ನಿರೀಕ್ಷಕ  ಮಾದೇಶ್ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ವಿಎಸ್ ದೊಡ್ಡಿ ಗ್ರಾಮದ ಪುಟ್ಟ ರಾಚಶೆಟ್ಟಿ ಎಂಬುವರು ಮೃತಪಟ್ಟಿದ್ದರು. ಇವರಿಗೆ ಸ್ವಂತ ಜಮೀನು ಇಲ್ಲದ ಕಾರಣ ಅಂತ್ಯಸಂಸ್ಕಾರಕ್ಕೆ ಕುಟುಂಬದವರು ಪರದಾಡಿದರು. ಈ ವೇಳೆ ಗ್ರಾಮದ ಹರೀಶ್ ಎಂಬ ವ್ಯಕ್ತಿ ತನ್ನ ಸ್ವಂತ ಜಮೀನಿನಲ್ಲಿ ಬೆಳೆದು ನಿಂತ ಜೋಳದ ಬೆಳೆಯನ್ನು ಕಟಾವು ಮಾಡಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು