ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಪುತ್ಥಳಿಗೆ ಮಾಲಾರ್ಪಣೆ, ಮಸ್ಜಿದೇ ಆಝಂ, ಸೆಂಟ್ ಫಿಲೋಮಿನಾ ಚರ್ಚ್ಗಳಿಗೆ ಭೇಟಿ, ಮಸೀದಿ ಗುರುಗಳು, ಚರ್ಚ್ ಬಿಷಪ್‌ರಿಂದ ಆಶೀರ್ವಾದ
ವರದಿ-ನಜೀರ್ ಅಹಮದ್, ಮೈಸೂರು
ಮೈಸೂರು : ಭಾರತ್ ಜೋಡೋ ಪಾದಯಾತ್ರೆ ರೂವಾರಿ ರಾಹುಲ್ ಗಾಂಧಿ ಸೋಮವಾರ ನಿಗದಿತ ಸಮಯಕ್ಕೆ ಸರಿಯಾಗಿ ನಗರದ ಹಾರ್ಡಿಂಜ್ ವೃತ್ತದಿಂದ ತಮ್ಮ ಪಾದಯಾತ್ರೆ ಆರಂಭಿಸಿದರು.
ಈ ವೇಳೆ ನರಸಿಂಹರಾಜ ಕ್ಷೇತ್ರಕ್ಕೆ ಸೇರಿದ ಅಶೋಕಾ ರಸ್ತೆ, ಫೌಂಟೆನ್ ಸರ್ಕಲ್, ಟಿಪ್ಪು ಸರ್ಕಲ್, ಎಲ್‌ಐಸಿ ಸರ್ಕಲ್‌ಗಳಲ್ಲಿನ ರಸ್ತೆಗಳ ಇಕ್ಕೆಲೆಗಳಲ್ಲಿ ಶಾಸಕ ತನ್ವೀರ್ ಸೇಠ್ ಹಾಗೂ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಅಭಿಮಾನಿಗಳು ಸೇರಿದ್ದನ್ನು ಕಂಡು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಪುಳಕಿತರಾದರು.
ಹಾರ್ಡಿಂಜ್ ವೃತ್ತದಿಂದ ಪ್ರಾರಂಭವಾದ ಪಾದಯಾತ್ರೆ ಜಯಚಾಮರಾಜ ಒಡೆಯರ್ ವೃತ್ತದ ಬಳಿ ಬರುತ್ತಿದ್ದಂತೆ ರಾಹುಲ್ ಗಾಂಧಿ ಒಡೆಯರ್ ಪುತ್ಥಳಿಗೆ ಮಾಲಾರ್ಪಣೆÀ ಮಾಡಿದರು. ನಂತರ ಅಶೋಕಾ ರಸ್ತೆ ಮೂಲಕ ೧೨೧ ವರ್ಷಗಳ ಹಳೆಯ ಮೈಸೂರಿನ ಪ್ರತಿಷ್ಠಿತ ಮಸ್ಜಿದೇ ಆಝಂ ಮಸೀದಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ತನ್ವೀರ್ ಸೇಠ್ ಅವರೊಂದಿಗೆ ಭೇಟಿ ನೀಡಿದರು. ಈ ವೇಳೆ ಮೈಸೂರಿನ ಸರ್‌ಖಾಝಿ ಸೈಯದ್ ಉಸ್ಮಾನ್ ಷರೀಫ್ ಅವರು ರಾಹುಲ್ ಗಾಂಧಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿ ಆಶೀರ್ವಾದ ಮಾಡಿದರು.
ನಂತರ ರಾಹುಲ್ ಗಾಂಧಿ ಮೈಸೂರಿನ ಹೆಸರಾಂತ ಸೆಂಟ್ ಫಿಲೋಮಿನಾ ಚರ್ಚ್ಗೆ ಭೇಟಿ ನೀಡಿ ಅಲ್ಲಿನ ಬಿಷಪ್ ಅವರಿಂದ ಗೌರವ ಸ್ವೀಕರಿಸಿದರು. ನಂತರ ಪಾದಯಾತ್ರೆ ಟಿಪ್ಪು ಸರ್ಕಲ್ ತಲುಪಿದಾಗ ರಸ್ತೆಯ ಇಕ್ಕೆಲೆಗಳಲ್ಲಿ ಭಾರಿ ಜನಸ್ತೋಮ ತಮ್ಮತ್ತ ಕೈಬೀಸಿದ್ದನ್ನು ಕಂಡು ರಾಹುಲ್ ಗಾಂಧಿ ಭಾವುಕರಾಗಿ ಜನರತ್ತ ಕೈ ಬೀಸಿದರು.
ಬಿಗಿ ಪೊಲೀಸ್ ಬಂದೋಬಸ್ತ್ : ಮೈಸೂರಿನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸದಲಾಗಿತ್ತು. ರಾಹುಲ್ ಗಾಂಧಿ ಅವರನ್ನು ನೋಡಲು ರಸ್ತೆಯ ಇಕ್ಕೆಲೆಗಳಲ್ಲಿ ಸೇರಿದ್ದ ಬಹುತೇಕ ಜನರಿಗೆ ರಾಹುಲ್ ದರ್ಶನವಾಗಲಿಲ್ಲ. ಕೆಲವೆಡೆ ಪೊಲೀಸರು ಮತ್ತು ಜನರ ಮಧ್ಯೆ ವಾಗ್ವಾದವೂ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ರಾಹುಲ್ ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಆರ್.ದ್ರುವನಾರಾಯಣ, ಶಾಸಕರಾದ ತನ್ವೀರ್ ಸೇಠ್, ಪ್ರಿಯಾಂಕ್ ಖರ್ಗೆ, ಡಾ.ಯತೀಂದ್ರ ಸಿದ್ದರಾಮಯ್ಯ, ಕೃಷ್ಣಭೈರೇಗೌಡ, ಮಾಜಿ ಶಾಸಕ ವಾಸು, ಮಾಜಿ ಮೇಯರ್ ಮೇಯರ್ ಅಯ್ಯೂಬ್ ಖಾನ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು