ಪರೇಶ್ ಮೇಸ್ತಾ ಸಾವಿಗೆ ಕೋಮುಬಣ್ಣ ಬಳಿದು 150 ಕೋಟಿ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯ
ಅಕ್ಟೋಬರ್ 07, 2022
ಮೈಸೂರು : ಪರೇಶ್ ಮೇಸ್ತಾ ಸಾವು ಸಹಜ ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಇದ್ದರೂ, ಜತೆಗೆ ಅಲ್ಲಿನ ಐಜಿಪಿ ಪತ್ರಿಕಾಗೋಷ್ಠಿ ನಡೆಸಿ ಇದು ಸಹಜ ಸಾವು ಎಂಬ ಸ್ಪಷ್ಟನೆ ನೀಡಿದ್ದರೂ ಸಾವಿಗೆ ಕೋಮು ಬಣ್ಣ ಬಳಿದು ರಾಜ್ಯಾದ್ಯಂತ ಗಲಭೆ ನಡೆಸಿ ಸುಮಾರು 150 ಕೋಟಿ ರೂ, ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದ ಶೋಭಾ ಕರಂದ್ಲಾಜೆ, ಸುನೀಲ್ ಕುಮಾರ್, ನಳೀನ್ ಕುಮಾರ್ ಕಟೀಲ್, ಸಿ.ಟಿ.ರವಿ, ಈಶ್ವರಪ್ಪ, ಅರವಿಂದ ಲಿಂಬಾವಳಿಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಶುಕ್ರವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, 2017 ಡಿಸೆಂಬರ್ 5 ರಂದು ಹೊನ್ನಾವರದಲ್ಲಿ ಒಂದು ಸಣ್ಣ ಗಲಭೆಯಾಗುತ್ತದೆ. ನಂತರ 2017 ಡಿಸೆಂಬರ್ 6ರಂದು ಹೊನ್ನಾವರದಿಂದ ಪರೇಶ್ ಮೇಸ್ತಾ ಎಂಬ 22 ವರ್ಷದ ಯುವಕ ಕಾಣೆಯಾಗುತ್ತಾನೆ. ನಂತರ ಡಿಸೆಂಬರ್ 8ಕ್ಕೆ ಅಲ್ಲಿನ ಶೆಟ್ಟಿಕಟ್ಟೆ ಎಂಬ ಕೆರೆಯಲ್ಲಿ ಪರೇಶ್ ಮೇಸ್ತಾ ಶವ ಪತ್ತೆಯಾಗುತ್ತದೆ. ಕೂಡಲೇ ಪೊಲೀಸರು ಪರೀಕ್ಷೆಗಾಗಿ ಶವವನ್ನು ಮಣಿಪಾಲ್ ಆಸ್ಪತ್ರೆಗೆ ಕಳಿಸುತ್ತಾರೆ. ಡಿಸೆಂಬರ್ 10ಕ್ಕೆ ಪೋಸ್ಟ್ ಮಾರ್ಟಮ್ ರಿಪೋರ್ಟ್‍ನಲ್ಲಿ ಯುವಕ ಕೆರೆಯಲ್ಲಿ ಮುಳುಗಿದ್ದರಿಂದ ನೀರು ಕುಡಿದು ಸಾವನ್ನಪ್ಪಿದ್ದಾನೆ ಎಂಬ ವರದಿ ಬರುತ್ತದೆ. ಅಂದೇ ಐಜಿಪಿ ಸಹ ಪತ್ರಿಕಾಗೋಷ್ಠಿ ನಡೆಸಿ ಇದು ಸಹಜ ಸಾವು. ಯಾವುದೇ ಕೊಲೆಯಲ್ಲ ಎಂಬ ಸ್ಪಷ್ಟನೆ ನೀಡಿದ್ದರೂ ಅಂದಿನ ಕೊಡಗು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮುಖಂಡರಾದ ಸುನೀಲ್ ಕುಮಾರ್, ನಳೀನ್ ಕುಮಾರ್ ಕಟೀಲ್, ಸಿ.ಟಿ.ರವಿ, ಈಶ್ವರಪ್ಪ, ಅರವಿಂದ ಲಿಂಬಾವಳಿಯವರು ಇದಕ್ಕೆ ಕೋಮು ಬಣ್ಣ ಬಳಿದು ಕುದಿಯುವ ಎಣ್ಣೆಯನ್ನು ಎರಚಿ, ವಿಷದ ಇಂಜೆಕ್ಷನ್ ಕೊಟ್ಟು ಐದು ಜನ ಮುಸ್ಲಿಂ ಯುವಕರು ಪರೇಶ್ ಮೇಸ್ತಾ ಕೊಲೆ ಮಾಡಿದ್ದಾರೆ ಎಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ವಿನಾಕಾರಣ ಕೋಮು ಗಲಭೆ ಸೃಷ್ಟಿಸಿ ಸರ್ಕಾರಿ ಮತ್ತು ಸಾರ್ವಜನಿಕರ 150 ಕೋಟಿ ಆಸ್ತಿ ನಷ್ಟಕ್ಕೆ ಕಾರಣರಾದರು ಎಂದು ಆರೋಪಿಸಿ, ಉತ್ತರ ಪ್ರದೇಶದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂಬ ಒಂದೇ ಕಾರಣಕ್ಕೆ ಮುಸ್ಲಿಂ ಯುವಕರ ಮನೆಗಳ ಮೇಲೆ ಬುಲ್ಡೋಜರ್ ಹರಿಸಿದ ಬಿಜೆಪಿ ಸರ್ಕಾರಕ್ಕೆ ಧಂ ಇದ್ದರೆ, ತಾಕತ್ ಇದ್ದರೆ ಅಥವಾ ಕನಿಷ್ಠ ನೈತಿಕತೆ ಇದ್ದರೆ, ಇವರ ಮನೆಗಳ ಮೇಲೂ ಬುಲ್ಡೋಜರ್ ಹರಿಸಲಿ, ಇವರ ಆಸ್ತಿಗಳನ್ನು ವಶಕ್ಕೆ ಪಡೆಯಲಿ, ಪಕ್ಷದಿಂದ ಇವರನ್ನು ಉಚ್ಛಾಟಿಸಲಿ ಎಂದು ಕಿಡಿಕಾರಿದರು.
ಪರೇಶ್ ಮೇಸ್ತಾ ಸತ್ತ 4 ದಿನದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾವiಯ್ಯ ಅವರು ಸಾವಿನ ತನಿಖೆಯನ್ನು ಬಿಜೆಪಿಯವರ ಒತ್ತಾಯಕ್ಕೆ ಮಣಿದು ಸಿಬಿಐಗೆ ವಹಿಸಿದ್ದರು. ಸಿಬಿಐ ಈ ಸಾವಿನ ತನಿಖೆಯನ್ನು ನಡೆಸಿ ಈ ಹಿಂದೆ 2 ಬಾರಿ ವರದಿ ಸಲ್ಲಿಸಿತ್ತು. ಆದರೆ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಇದಕ್ಕೆ ತಡೆಯೊಡ್ಡಿತು. ಈಗ ಸಿಬಿಐ ಹೊನ್ನಾವರ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ತನ್ನ ವರದಿ ಸಲ್ಲಿಸಿದೆ. ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಸಹಜವಾದುದ್ದು ಎಂದು ತಿಳಿಸಲಾಗಿದೆ. ಈಗಲಾದರೂ ರಾಜ್ಯದ ಜನರು ಬಿಜೆಪಿಯ ಆಟಾಟೋಪಗಳ ಬಗ್ಗೆ ಜಾಗೃತರಾಗಿ ತಮ್ಮ ಮಕ್ಕಳನ್ನು ಕಾಪಾಡಿಕೊಳ್ಳಬೇಕು ಎಂದು ಲಕ್ಷ್ಮಣ್ ಸಲಹೆ ನೀಡಿದರು.
ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯ ಕಾರ್ಯಕರ್ತನಲ್ಲದ ಪರೇಶ್ ಮೇಸ್ತಾನನ್ನು ಬಿಜೆಪಿ ಕಾರ್ಯಕರ್ತ, ಹಿಂದೂ ಕಾರ್ಯಕರ್ತ ಎಂದು ಬಿಜೆಪಿ ಮುಖಂಡರು ಬಿಂಬಿಸಿ ಕರಾವಳಿಯಲ್ಲಿ ಕೋಮುಗಲಭೆ ಸೃಷ್ಟಿಸಿ 37 ಕ್ಷೇತ್ರಗಳಲ್ಲಿ 35 ಕ್ಷೇತ್ರಗಳನ್ನು ಗೆಲ್ಲಲು ಯಶಸ್ವಿಯಾದರು. ಈ ವಿಷಯವನ್ನು ನಾವು ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಲಕ್ಷ್ಮಣ್ ಹೇಳಿದರು.
ಘಟನೆಯಲ್ಲಿ ಐಜಿಪಿ ಕಾರು ಸುಡಲಾಯಿತು. ಐದು ಜನ ಪೊಲೀಸರಿಗೆ ಹೊಡೆದು ಗಾಯ ಮಾಡಲಾಯಿತು. ಒಬ್ಬ ಪೊಲೀಸ್ ಕೈ ಕಳೆದುಕೊಂಡಿದ್ದಾರೆ. ಅಮಾಯಕ 5 ಜನ ಮುಸ್ಲಿಂ ಹುಡುಗರು ತಮ್ಮದಲ್ಲದ ತಪ್ಪಿಗೆ 3 ವರ್ಷ ಜೈಲುವಾಸ ಅನುಭವಿಸಬೇಕಾಯಿತು. ಇದೆಕ್ಕೆಲ್ಲಾ ಬಿಜೆಪಿ ಕಾರಣ. ಸಿದ್ದರಾಮಯ್ಯ ಸರ್ಕಾರದಲ್ಲಿ 23 ಹಿಂದೂಗಳ ಹತ್ಯೆಯಾಯಿತು ಎಂದು ಹೇಳುತ್ತಿರುವ ಬಿಜೆಪಿ ಅದೇ ಸಮಯದಲ್ಲಿ 37 ಜನ ಮುಸ್ಲಿಂ ಯುವಕರ ಹತ್ಯೆಯೂ ನಡೆಯಿತು. ಅವರು ಮನುಷ್ಯರಲ್ಲವೇ, ಎಲ್ಲಾ ಸಾವುಗಳ ತನಿಖೆ ನಡೆದರೆ ಇದಕ್ಕೆಲ್ಲಾ ಬಿಜೆಪಿ ಆರ್‍ಎಸ್‍ಎಸ್ ಕಾರಣ ಎಂಬ ವರದಿ ಬಂದೇ ಬರುತ್ತದೆ. ಅಮಾಯಕ ಕನ್ನಡಿಗರು ಬಿಜೆಪಿ, ಆರ್‍ಎಸ್‍ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಕೋರಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಠಧ್ಯಕ್ಷ ಆರ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿಎಂ ರಾಮು, ಕಾರ್ಯದರ್ಶಿ ಈಶ್ವರ ಚಕ್ಕಡಿ ಇದ್ದರು.
0 ಕಾಮೆಂಟ್‌ಗಳು