ಸುತ್ತೋಲೆ ದುರುಪಯೋಗವಾದರೆ ವಾಪಸ್
ಮೈಸೂರು : ಸರ್ಕಾರಿ ಶಾಲೆ ಅಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ಮಾಡಲು ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಇದಕ್ಕೂಶಿಕ್ಷಣ ಮಂತ್ರಿ ಅಥವಾ ಮುಖ್ಯಮಂತ್ರಿಗಳಿಗೆ ಸಂಬಂಧ ಇಲ್ಲ ಎಂದು
ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಕೆಲವರು ಇದನ್ನು ಸರಿಯಾಗಿ ಓದಿಕೊಳ್ಳದೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಬಗ್ಗೆ ನಾವು ಆಯುಕ್ತರನ್ನು ಕೇಳಿದಾಗ ಎಸ್‍ಡಿಎಂಸಿಗಳ ಸಲಹೆ ಮೇರೆಗೆ ಈ ಸುತ್ತೋಲೆ ತರಲಾಗಿದೆ ಎಂದರು.
ಶಿಕ್ಷಣ ಇಲಾಖೆ ಗೊಂದಲಗಳನ್ನು ನಿವಾರಿಸಲು ಸುತ್ತೋಲೆ ಹೊರಡಿಸಲು ಆಯುಕ್ತರಿಗೆ ಸಂವಿಧಾನದಲ್ಲೇ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಸುತ್ತೋಲೆಗಳನ್ನೂ ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕು ಅಂತೇನೂ ಇಲ್ಲ. ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್‍ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆರ್‍ಟಿಇ ಒಳ್ಳೆಯ ಕಾಯ್ದೆ, ಅದನ್ನು ಜಾರಿಗೆ ತಂದವರು ಸಿದ್ದರಾಮಯ್ಯನವರ ಸರ್ಕಾರದವರು. ಎಲ್ಲಿಯೂ ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕು ಎಂದು ಹೇಳಿಲ್ಲ. ಅವರಾಗಿಯೇ ಕೊಟ್ಟರೆ, ತಿಂಗಳಿಗೆ 100 ರೂ.ವರೆಗೆ ಪಡೆದು ರಶೀದಿ ಕೊಡಬೇಕು ಎಂದು ಹೇಳಿದೆ. ಆದರೆ, ದೇಶದಲ್ಲೇ ಕಾನೂನು ಪಂಡಿತ ಎನಿಸಿಕೊಂಡ ಸಿದ್ದರಾಮಯ್ಯ ಇದರಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಎಲ್‍ಕೆಜಿ ಹಾಗೂ ಯುಕೆಜಿ ತರಗತಿ ಶುರು ಮಾಡಿದ್ದಾರೆ. ಅವರಿಗೆ ಸಂಭಾವನೆ ಕೊಡುವ ನಿಟ್ಟಿನಲ್ಲಿ ಆಯಾ ಎಸ್‍ಡಿಎಂಸಿ ತೀರ್ಮಾನ ಮಾಡುತ್ತವೆ. ಸುತ್ತೋಲೆ ದುರುಪಯೋಗವಾದರೆ ಹಿಂಪಡೆಯಲಾಗುವುದು ಎಂದರು.
0 ಕಾಮೆಂಟ್‌ಗಳು