ಸರ್ಕಾರಿ ಶಾಲೆಗಳಲ್ಲಿ 100 ರೂ. ಶುಲ್ಕ ವಸೂಲಿ ಬಗ್ಗೆ ಎಂಎಲ್‍ಸಿ ವಿಶ್ವನಾಥ್ ಕಿಡಿ : `ಸರ್ಕಾರಿ ಶಿಕ್ಷಣ ದಿಕ್ಕುತಪ್ಪಿದೆ’ ಕೂಡಲೇ ಸುತ್ತೋಲೆ ವಾಪಸ್ ಪಡೆಯುವಂತೆ ಆಗ್ರಹ

ಉಚಿತ ಕಡ್ಡಾಯ ಶಿಕ್ಷಣ ಸರ್ಕಾರದ ನೀತಿಯಾಗಲಿ 
ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಬೇಡ : ವಿಶ್ವನಾಥ್ ವಾಗ್ದಾಳಿ

ಮೈಸೂರು : ಕೇವಲ ಶೋಷಿತ ಸಮುದಾಯದ ಮಕ್ಕಳು ಕಲಿಯುತ್ತಿದ್ದ ಸರ್ಕಾರಿ ಶಾಲೆಗಳಿಗೆ 100 ರೂ. ಶುಲ್ಕ ನಿಗದಿ ಮಾಡುವ ಮೂಲಕ ಸರ್ಕಾರವೇ ಬಡವರ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದರ ಜತೆಗೆ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಶಿಕ್ಷಣ ಸಚಿವ ಅಡಗೂರು ಎಚ್.ವಿಶ್ವನಾಥ್ ಕಿಡಿಕಾರಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಮತ್ತು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಆಕರ್ಷಕ ರೂಪು ರೇಷೆಗಳನ್ನು ಸಿದ್ದಪಡಿಸುವ ಬದಲು ಸರ್ಕಾರಿ ಶಾಲೆಗಳನ್ನು ಮುಚ್ಚಲು ಏನೇನು ಹುನ್ನಾರಗಳು ಮಾಡಬೇಕೋ ಅದನ್ನೆ ಈ ಸರ್ಕಾರ ಮಾಡುತ್ತಿದೆ. ಸರ್ಕಾರಿ ಶಿಕ್ಷಣ ಹಳಿ ತಪ್ಪಿದೆ. ಇದಕ್ಕೆ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳು ಹೊಣೆಗಾರರು, ಕೂಡಲೇ ಈ ಸುತ್ತೋಲೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ತಾವು ಶಿಕ್ಷಣ ಮಂತ್ರಿ ಆಗಿದ್ದಾಗ ಗುಣಾತ್ಮಕ ಶಿಕ್ಷಣಕ್ಕೆ ಕರ್ನಾಟಕ ಹೆಸರು ಮಾಡಿತ್ತು. ನಾವು ಉಚಿತ ಪುಸ್ತಕ, ಯೂನಿಫಾರಂ, ಬಿಸಿಯೂಟ ನೀಡುತ್ತಿದ್ದೇವು. ಅಂದಿನ ರಾಷ್ಟ್ರಪತಿಗಳು ನಮ್ಮನ್ನು ಕರೆಸಿ ಗೌರವಿಸಿದ್ದರು. ಅಕ್ಷರ, ಅನ್ನ, ಆರೋಗ್ಯ ನೀಡುವುದು ಸರ್ಕಾರದ ಆದ್ಯತೆಯಾಗಬೇಕು. ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕಾಗಿದೆ. ಇದು ಸರ್ಕಾರದ ಜವಾಬ್ದಾರಿಯೂ ಹೌದು. ಮಕ್ಕಳಿಂದಲೇ ಹಣ ವಸೂಲಿಗೆ ಮುಂದಾಗುವುದು ಬೇಡ ಎಂದರು.
ಈ ಹಿಂದೆ ಉತ್ತರ ಕರ್ನಾಟಕದ 8 ಜಿಲ್ಲೆಗಳ 16 ಲಕ್ಷ ಮಕ್ಕಳಿಗೆ ಅಜೀಂ ಪ್ರೇಂಜಿ ಫೌಂಡೇಷನ್ ಸಹಕಾರದಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿತ್ತು. ಸರ್ಕಾರದಲ್ಲಿ ಹಣವಿಲ್ಲದಿದ್ದರೇ ದಾನಿಗಳನ್ನು ಹಿಡಿಯಿರಿ. ಅದನ್ನು ಬಿಟ್ಟು ಬಡ ಪೋಷಕರಿಗೆ ನಿರ್ವಹಣೆಗೆ ಹಣ ಕೊಡಿ ಎಂದರೆ ಅವರು ಮಕ್ಕಳನ್ನು ಶಾಲೆಗಳಿಗೆ ಕಳಿಸುವುದಿಲ್ಲ. ನಿಮಗೆ ಬೇಕಾದುದ್ದೂ ಸಹ ಅದೇ ಎಂದು ವ್ಯಂಗ್ಯವಾಡಿದರು.
ಕೋವಿಡ್ ಸಂದರ್ಭದಲ್ಲಿ ಸಾವಿರಾರು ಮಕ್ಕಳು ಶಾಲೆಗಳಿಂದ ಹೊರಗುಳಿದರು. ನಂತರ ಹೊಟ್ಟೆಪಾಡಿಗಾಗಿ ಮಕ್ಕಳು ಕಾರ್ಖಾನೆ, ಹೋಟೆಲ್ ಮತ್ತಿತರ ಕಡೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೋವಿಡ್ ನಂತರವೂ ಆ ಮಕ್ಕಳು ಶಾಲೆಗಳ ಕಡೆ ಮುಖ ಹಾಕಿಲ್ಲ. ಇನ್ನೂ ಕೆಲಸಕ್ಕೆ ಹೋಗುತ್ತಿದ್ದಾರೆ. ಸರ್ಕಾರ ಏನು ಮಾಡುತ್ತಿದೆ. ಅದಕ್ಕೆ ಜವಾಬ್ದಾರಿ ಇಲ್ಲವೇ? ಒಂದು ಕಡೆ ಕನ್ನಡ ಭಾಷೆ ನಶಿಸುತ್ತಿದೆ ಮತ್ತೊಂದು ಕಡೆ ಸರ್ಕಾರವೇ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆ. ಆರ್‍ಟಿಐ ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು. ಯಾವುದೇ ಸಬೂಬು ನೀಡದೆ ಈ ಸುತ್ತೋಲೆ ವಾಪಸ್ ಪಡೆಯಬೇಕೆಂದು ಹರಿಹಾಯ್ದರಲ್ಲದೇ,
ಎತ್ತರದ ಪ್ರತಿಮೆಗಳನ್ನು ನಿಲ್ಲಿಸುವದರಿಂದ ಯಾವುದೇ ದೇಶ ಪ್ರಗತಿಯಾಗುವುದಿಲ್ಲ. ಶಿಕ್ಷಣ ಮತ್ತು ಆರೋಗ್ಯದ ಮೇಲೆ ಆ ದೇಶದ ಪ್ರಗತಿ ನಿಂತಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಮಂತ್ರಿಗಳು ಹಣ ವಸೂಲಿ ಕಡ್ಡಾಯ ಮಾಡಿಲ್ಲ ಕೇವಲ ಎಸ್‍ಡಿಎಂಸಿ ಒಪ್ಪಿಗೆ ಮೇರೆಗೆ ಸುತ್ತೋಲೆ ಹೊರಡಿಸಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್ ಸುತ್ತೋಲೆ ಎನ್ನುವುದು ಆಡಳಿತ ಭಾಷೆ ಒಮ್ಮೆ ಹೊರಡಿಸಿದರೆ ವಸೂಲಿ ಕಡ್ಡಾಯ ಮಾಡಿದಂತೆ ಎಂದರು.
ಮುಖಂಡ ರೇವಣ್ಣ ಇದ್ದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು