ಬಡವ, ಶ್ರೀಮಂತ ಎಂಬ ತಾರತಮ್ಯವಿಲ್ಲದೇ ರಾಜಕಾಲುವೆ ಒತ್ತುವರಿ ತೆರವು : ಸಚಿವ ಆರ್.ಅಶೋಕ್ ಸ್ಪಷ್ಟನೆ
ಸೆಪ್ಟೆಂಬರ್ 20, 2022
ಮೈಸೂರು : ಸೆ. ೨೦ : ಬಡವ, ಶ್ರೀಮಂತ ಎಂ ತಾರತಮ್ಯವಿಲ್ಲದೆ ರಾಜಕಾಲುವೆಯನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಎಲ್ಲವನ್ನೂ ತೆರವುಗೊಳಿಸಲಾಗುವುದು. ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಮಂಗಳವಾರ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ನಿರಂತರ ಪ್ರಕ್ರಿಯೆ ಆಗಬೇಕು. ಇಲ್ಲದಿದ್ದರೆ ಎಲ್ಲಿ ಒತ್ತುವರಿ ತೆರವಾಗಿರುತ್ತದೆ ಅಲ್ಲಿ ಮತ್ತೆ ಕಟ್ಟಿಕೊಳ್ಳುತ್ತಾರೆ. ಮತ್ತೆ ಹೊಸ ಒತ್ತುವರಿ ನಡೆಯುತ್ತಿರುತ್ತದೆ. ಆದ್ದರಿಂದ ನಿರಂತರವಾಗಿ ನಡೆಯಬೇಕು ಎಂದು ಸಭೆ ಮಾಡಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬಡವರು, ಸಾಹುಕಾರರು, ಮಧ್ಯಮವರ್ಗ ಎಂಬ ಯಾವುದೇ ಮುಲಾಜಿಗೂ ಓಲಗಾಗದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿದರೆ ಮಾತ್ರ ಜನ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.
ಈ ವಿಚಾರವಾಗಿ ನ್ಯಾಯಾಲಯಕ್ಕೂ ಮನವಿ ಸಲ್ಲಿಸಿದ್ದೇವೆ. ಕೇವಿಯಟ್ ಹಾಕಲು ಕೂಡ ನಾನು ಅಡ್ವೋಕೇಟ್ ಜನರಲ್ ಹತ್ತಿರ ಮಾತನಾಡಿದ್ದೇನೆ. ಇದು ನಿರಂತರವಾಗಿ ನಡೆಯುವಂತಹ ಪ್ರಕ್ರಿಯೆ ಆಗಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಕೇವಲ ಎರಡು ಝೋನ್‌ನಲ್ಲಿ ಮಾತ್ರನಾ? ಅಥವಾ ಸಂಪೂರ್ಣ ಬೆಂಗಳೂರಿನಲ್ಲಿ ಒತ್ತುವರಿ ತೆರವು ನಡೆಯಲಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಂಪೂರ್ಣ ಬೆಂಗಳೂರಿಗೆ ಅನ್ವಯ. ಸದ್ಯಕ್ಕೆ ಎರಡು ಝೋನ್‌ನಲ್ಲಿ ಮಾತ್ರ ಪ್ರವಾಹವುಂಟಾಗಿದೆ. ಅಲ್ಲಿ ಇನ್ನೂ ಕೂಡ ಕೆಲವು ಕಡೆ ಸಣ್ಣ ನೀರಿದೆ. ಮುಂದೆಯೂ ಮಳೆ ಬರಬಹುದು. ಎಲ್ಲಿ ಪ್ರವಾಹವುಂಟಾಗಿದೆ ಆ ಕಡೆ ತೆರವು ಮುಂದುವರಿಯಲಿದೆ. ಉಳಿದ ಬೆಂಗಳೂರಿನ ಬೇರೆ ಬೇರೆ ಭಾಗಗಳಲ್ಲಿ ಕೂಡ ಒತ್ತುವರಿ ತೆರವು ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿಯೂ ಆರೋಪ-ಪ್ರತ್ಯಾರೋಪ ರಾಜಕಾರಣ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಏನೇ ಮಾಡಿದರೂ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಇದ್ದೇ ಇರುತ್ತೆ. ನಿನ್ನೆಯೂ ಕೂಡ ಮಾತನಾಡಿದ್ದೇನೆ. ಬಡವರ ಮನೆ ಒಡೆದರೆ ಮಾಧ್ಯಮದವರು ಬಿಡಲ್ಲ. ಸಾಹುಕಾರರ ಮನೆ ಒಡೆದರೆ ಕಾಂಗ್ರೆಸ್‌ನವರು ಬಿಡಲ್ಲ. ಈ ಸಮಸ್ಯೆ ಆಗುತ್ತಿದೆ. ಅವರು ದೊಡ್ಡ ದೊಡ್ಡವರ ಹೆಸರುಗಳನ್ನು ಹೇಳುತ್ತಾರೆ ಅದಕ್ಕಾಗಿ ನಾವು ಯಾವುದಕ್ಕೂ ಗಮನ ಕೊಡದೆ ರಾಜಕಾಲುವೆ ಯಾರು ಒತ್ತುವರಿ ಮಾಡಿದ್ದಾರೆ ಅದನ್ನು ತೆರವುಗೊಳಿಸಿದರೆ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ಇಲ್ಲದಿದ್ದರೆ ಪ್ರತಿ ಮಳೆಬಂದಾಗ ಒತ್ತುವರಿ ತೆರವುಗೊಳಿಸುತ್ತೇವೆ ಎನ್ನುವುದು ಕಾಮನ್ ಡೈಲಾಗ್ ಆಗಿಬಿಡುತ್ತದೆ. ಯಾರಿಗೂ ಸಾಫ್ಟ್ ಕಾರ್ನರ್ ಇಲ್ಲ ಎಂದು ತಿಳಿಸಿದರು.
ಬಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಆ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದರು.
0 ಕಾಮೆಂಟ್‌ಗಳು