ಮೈಸೂರು ಅರಮನೆಯಲ್ಲಿ ರತ್ನಖಚಿತ ಸಿಂಹಾಸನಾ ಜೋಡಣಾ ಕಾರ್ಯ ಸಂಪೂರ್ಣ


 ಮೈಸೂರು : ಸೆ.೨೦ : ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಾಗೂ ನವರಾತ್ರಿ ಪ್ರಯುಕ್ತ ಮಂಗಳವಾರ ಅಂಬಾವಿಲಾಸ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ನಡೆಯಿತು.

ಸಿಂಹಾಸನ ಜೋಡಣಾ ಕಾರ್ಯ ಇದ್ದ ಕಾರಣ ಬೆಳಿಗ್ಗೆ ೭ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಅರಮನೆ ಪ್ರವೇಶಿಸುವ ಎಲ್ಲ ದ್ವಾರಗಳನ್ನು ಬಂದ್ ಮಾಡಲಾಗಿತ್ತು. 

ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯದೊಂದಿಗೆ ಮೈಸೂರು ಅರಮನೆಯಲ್ಲಿ ದಸರಾ ಖಾಸಗಿ ದರ್ಬಾರ್ ಸಿದ್ಧತೆಗೆ ಚಾಲನೆ ಲಭಿಸಿದಂತಾಗಿದೆ. ಅರಮನೆ ಪಂಚಾಂಗದಂತೆ ಮಂಗಳವಾರ ಬೆಳಿಗ್ಗೆ  ಸಿಂಹಾಸನ ಜೋಡಣೆ ಅಂಗವಾಗಿ ಚಾಮುಂಡೇಶ್ವರಿ ಪೂಜೆ, ಗಣಪತಿ ಹೋಮ ನಡೆಯಿತು. ನವರಾತ್ರಿ ವೇಳೆ ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್‌ನ ಸಿಂಹಾಸನಾರೋಹಣಕ್ಕೆ ಬಳಸುವ ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಸಮ್ಮುಖದಲ್ಲಿ ಅರಮನೆಯ ನೆಲಮಾಳಿಗೆಯಲ್ಲಿನ ಭದ್ರತಾ ಕೊಠಡಿಯಿಂದ  ರತ್ನ ಖಚಿತ ಸಿಂಹಾಸನದ ಬಿಡಿ ಭಾಗಗಳನ್ನು ಹೊರತೆಗೆದು ನವಗ್ರಹ ಹೋಮ ಇನ್ನಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪೂಜಾ ಕಾರ್ಯದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಾಗಿಯಾದರು. ನಂತರ ಅಂಬಾವಿಲಾಸ ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಯಿತು. 

ರಾಜವಂಶಸ್ಥರು ಆಸೀನರಾಗುವ ಸ್ಥಳ, ಸಿಂಹಾಸನವನ್ನೇರಲು ಬಳಸುವ ಮೆಟ್ಟಿಲು, ಮೆರಗು ನೀಡುವ ಛತ್ರಿ, ಸೇರಿದಂತೆ ಪ್ರಮುಖವಾಗಿ ವಿಂಗಡಿಸಿಟ್ಟಿರುವ ಹದಿಮೂರು ಭಾಗಗಳನ್ನು ನಾಜೂಕಿನಿಂದ ಜೋಡಿಸಲಾಯಿತು. ಇದನ್ನು ಸ್ವರ್ಣಾಸನ ಜೋಡಣಾ ಕಾರ್ಯ ಅಂತಲೂ ಕರೆಯಲಾಗುತ್ತದೆ. ಈ ಸೂಕ್ಷ್ಮ ಕಾರ್ಯವನ್ನು ಮೈಸೂರು ಗೆಜ್ಜಹಳ್ಳಿ ಗ್ರಾಮಸ್ಥರು ನಿರ್ವಹಿಸುತ್ತಿದ್ದಾರೆ. ನವರಾತ್ರಿ ಮೊದಲ ದಿನ ರಾಜವಂಶಸ್ಥರು ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಸಿಂಹದ ಆಕೃತಿಯನ್ನು ಜೋಡಿಸಿದ ನಂತರವಷ್ಟೇ ಪರಿಪೂರ್ಣ ಸಿಂಹಾಸನವಾಗಲಿದೆ. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಿಂಹಾಸನ ಜೋಡಣಾ ಕಾರ್ಯದಲ್ಲಿ ಭಾಗವಹಿದ್ದರು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು