ರಾಜ್ಯಾದ್ಯಂತ ೩೫ ಲಕ್ಷ ಸಹಿ ಸಂಗ್ರಹ ಸಾರ್ವಜನಿಕ, ಸರ್ಕಾರಿ ಶಿಕ್ಷಣ ಉಳಿಸುವಂತೆ ವಿಧ್ಯಾರ್ಥಿಗಳ ಆಗ್ರಹ
ಸೆಪ್ಟೆಂಬರ್ 28, 2022
ಬೆಂಗಳೂರು : ರಾಜ್ಯ ಮಟ್ಟದ ವಿದ್ಯಾರ್ಥಿಗಳ ಬೃಹತ್ ಸಮಾವೇಶ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜರುಗಿತು.
ಮೈಸೂರು ಜಿಲ್ಲೆಯಲ್ಲಿ ೧೫೦ ದಿನಗಳ ಸತತ ಸಹಿ ಸಂಗ್ರಹ ಅಭಿಯಾನದ ಚಳುವಳಿಯಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ೩.೭೧ ಲಕ್ಷಕ್ಕೂ ಅಧಿಕ ಸಹಿಗಳು ಸಂಗ್ರಹವಾಗಿದ್ದು, ಸಮಾವೇಶದಲ್ಲಿ ಮೈಸೂರಿನಿಂದ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಮಾವೇಶದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ಎ. ಮುರಿಗೆಪ್ಪ ಅವರು, "ಶಿಕ್ಷಣವನ್ನು ಇನ್ನಷ್ಟು ದುಬಾರಿಗೊಳಿಸಿ ಸರ್ಕಾರವು ಜನ ವಿರೋಧಿಯಾದಾಗ ಹೋರಾಟ ನಡೆಸುವುದು ವಿದ್ಯಾರ್ಥಿಗಳ ಹಕ್ಕು ಮತ್ತು ಜವಾಬ್ದಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಭಗತ್ ಸಿಂಗರ ಬದುಕು ಮಾದರಿಯಾಗಿದೆ. ಹಲವಾರು ಕಷ್ಟಗಳನ್ನು, ಸವಾಲುಗಳನ್ನು ಎದುರಿಸಿ ಶಿಕ್ಷಣದ ಉಳಿವಿಗಾಗಿ ನಡೆಯುತ್ತಿರುವ ಈ ಚಳುವಳಿಯು ಮಹಾಶಕ್ತಿಯಾಗಿ ಬೆಳೆಯಲಿ ಎಂದು ಶುಭಾಶಯ ಕೋರಿ ಹೋರಾಟ ನಿರತ ವಿದ್ಯಾರ್ಥಿಗಳನ್ನು ಬೆಂಬಲಿಸಿದರು.
ಎಐಡಿಎಸ್‌ಓ ಅಖಿಲ ಭಾರತ ಸಮಿತಿಯ ಅಧ್ಯಕ್ಷರಾದ ವಿ.ಎನ್. ರಾಜಶೇಖರ್ ಮಾತನಾಡಿ, "ರಾಜ್ಯ ಸರ್ಕಾರವು ಎನ್‌ಇಪಿ ಯನ್ನು ಜಾರಿ ಮಾಡಿದ ಮೊಟ್ಟ ಮೊದಲ ರಾಜ್ಯವೆಂದು ಬಹಳ ಹೆಗ್ಗಳಿಕೆಯಿಂದ ಹೇಳಿಕೊಂಡಿದೆ. ಆದರೆ ಎನ್‌ಇಪಿ-೨೦ ಯನ್ನು ವಿರೋಧಿಸಿದ ಮೊದಲ ರಾಜ್ಯವೂ ಕರ್ನಾಟಕವೇ. ಈ ಹೊಸ ಶಿಕ್ಷಣ ನೀತಿಯು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಕಮರಿ ಹೋಗುವಂತಹ ಶಿಫಾರಸ್ಸುಗಳನ್ನು ಮಾಡಿದೆ. ಈ ಮೊದಲು ಕಾಂಗ್ರೆಸ್ ಸರ್ಕಾರವು ೧೯೮೬ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಶಿಕ್ಷಣದ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿತ್ತು. ಈಗಿನ ಕೇಂದ್ರ ಬಿಜೆಪಿ ಸರ್ಕಾರವು ಈ ನೀತಿಯ ಮೂಲಕ ಶಿಕ್ಷಣವನ್ನು ಮತ್ತಷ್ಟು ರಭಸವಾಗಿ ಕಾರ್ಪೋರೇಟೀಕರಣಗೊಳಿಸಲು ಸಜ್ಜಾಗಿ ಬಡ ವಿದ್ಯಾರ್ಥಿಗಳಿಗೆ, ಬಡಜನತೆಗೆ ದ್ರೋಹ ಬಗೆಯುತ್ತಿದೆ. ಉನ್ನತ ಶಿಕ್ಷಣ ಸಚಿವರು ನೂತನ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕೇವಲ ೨ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ನಾವು ರಾಜ್ಯ ಬಜೆಟ್‌ನಲ್ಲಿ ಶೇ.೩೦ರಷ್ಟು ಶಿಕ್ಷಣಕ್ಕೆ ಮೀಸಲಿಡಿ ಎಂದು ಆಗ್ರಹಿಸುತ್ತಿದ್ದಾಗ, ಸರ್ಕಾರದ ಈ ಹೇಳಿಕೆ ಅವರ ಕಡು ಶಿಕ್ಷಣ ವಿರೋಧಿ, ಬಡ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಹತ್ತು ಹಲವು ಶಿಕ್ಷಣ ವಿರೋಧಿ ಶಿಫಾರಸ್ಸುಗಳನ್ನು ಈ ನೀತಿ ಹೊಂದಿದೆ. ಇದರ ವಿರುದ್ಧ ಪ್ರಬಲ ಚಳುವಳಿಯನ್ನು ಕಟ್ಟುವುದು ಈ ಘಳಿಗೆಯ ಅವಶ್ಯಕತೆ ಎಂದು ಹೇಳಿದರು.
ಎಐಡಿಎಸ್‌ಓ ಅಧ್ಯಕ್ಷರಾದ ಕೆ.ಎಸ್.ಅಶ್ವಿನಿ, ಕಾರ್ಯದರ್ಶಿ ಅಜಯ್ ಕಾಮತ್ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು