ಮೈಸೂರಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟನೆ
ಮೈಸೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನನ್ನನ್ನು ಪಂಚಮಸಾಲಿ ಶ್ರೀಗಳ ವಿರೋಧಿಗಳು ಎಂದು ಸುಖಾಸುಮ್ಮನೆ ಬಿಂಬಿಸಿ ಶ್ರೀಗಳಿಗೆ ತಪ್ಪು ಸಂದೇಶ ರವಾನೆ ಮಾಡಿದ್ದಾರೆ. ಬಿಎಸ್‌ವೈ ಅಥವಾ ನಾನು ಯಾವುದೇ ಕಾರಣಕ್ಕೂ ಪಂಚಮಸಾಲಿ ಶ್ರೀಗಳ ವಿರೋಧಿಯಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ರಾಘವೇಂದ್ರ ಹೇಳಿದರು.
ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಏರ್ಪಡಿಸಿರುವ ಮೋದಿ ಯುಗ ಉತ್ಸವ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಪದೇ ಪದೇ ಈ ವಿಚಾರದಲ್ಲಿ ಯಡಿಯೂರಪ್ಪ ಮತ್ತು ನನ್ನ ಹೆಸರನ್ನೂ ಕೂಡ ಎಳೆದು ತರುವ ಪ್ರಯತ್ನವಾಗುತ್ತಿದೆ. ಕೇವಲ ಒಂದು ವರ್ಗಕ್ಕೆ ಸೀಮಿತವಾದ್ದ ಭಾರತೀಯ ಜನತಾ ಪಕ್ಷವನ್ನು ರಾಜ್ಯದ ಹಳ್ಳಿಹಳ್ಳಿಗೆ ತೆಗೆದುಕೊಂಡು ಹೋಗಿದ್ದು ಬಿ.ಎಸ್.ಯಡಿಯೂರಪ್ಪನವರು. ಅವರ ಹೋರಾಟಗಳು ಮತ್ತು ಅಧಿಕಾರ ಸಿಕ್ಕಂತಹ ಸಂದರ್ಭದಲ್ಲಿ ಯಾವ ರೀತಿ ಎಲ್ಲ ಜಾತಿ, ಸಮುದಾಯ, ವರ್ಗಗಳನ್ನೂ ಜೊತೆಯಾಗಿ ತೆಗೆದುಕೊಂಡು ಹೋಗಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಇನ್ನು ಪಂಚಮಸಾಲಿ ವಿಚಾರದಲ್ಲಿ ಯಡಿಯೂರಪ್ಪನವರು ಯಾವತ್ತೂ ವಿರೋಧವನ್ನು ಮಾಡಿಲ್ಲ. ಮುಖ್ಯಮಂತ್ರಿಗಳ ಮೇಲೆ, ಒತ್ತಡ ಹಾಕುತ್ತಿದ್ದಾರೆ, ಜಾಗಕ್ಕೆ ಬಿಡುತ್ತಿಲ್ಲ ಇವೆಲ್ಲ ಕಪೋಲ ಕಲ್ಪಿತ. ಯಾವುದೇ ಜಾತಿಗೆ ಅನ್ಯಾಯವಾದರೂ ಯಡಿಯೂರಪ್ಪನವರಿಗೆ ನೋವಾಗುತ್ತದೆ. ಇದರಿಂದ ಈ ರೀತಿ ಹೇಳಿಕೆಗಳು ಸತ್ಯಕ್ಕೆ ದೂರವಾದದ್ದು. ಯಾರೋ ಶ್ರೀಗಗಳನ್ನು ತಪ್ಪು ದಾರಿಗೆ ಎಳೆಯತಕ್ಕಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವ ಬಗ್ಗೆ ಮಾತನಾಡಿದ ಅವರು, ಬೇರೆ ಜಿಲ್ಲೆಗಳಲ್ಲಿಯೂ ಐಸಿಸ್ ಪ್ರಾಯೋಜಿತ ಯುವಕರು ಸಾಕಷ್ಟಿದ್ದಾರೆ. ಇಂಜಿನಿಯರಿಂಗ್, ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಪದವೀಧರರು ಈ ರೀತಿ ತೊಡಗಿಸಿಕೊಂಡಿರುವುದು ನಿಜಕ್ಕೂ ಗಂಭೀರವಾದಂತಹ ವಿಚಾರ. ಇಬ್ಬರು ಶಂಕಿತರನ್ನು ಬಂಧಿಸಿರುವ ರಾಜ್ಯದ ಪೊಲೀಸರಿಗೆ ಅಭಿನಂದನೆ ಸಲ್ಲಿಸಲು ಇಚ್ಛೆ ಪಡುತ್ತೇನೆ ಎಂದರು.
ಕರ್ನಾಟಕ ಎಂದರೆ ಸರ್ವಜನಾಂಗದ ಶಾಂತಿಯ ತೋಟ. ಶಾಂತಿ ನಮ್ಮ ರಾಜ್ಯದಲ್ಲಿ ಉಳಿಯಬೇಕು ನೆಲೆಸಬೇಕು ಎನ್ನುವುದಾದರೇ ಎಲ್ಲ ರಾಜಕೀಯ ಪಕ್ಷಗಳು ಕೂಡ ಎಚ್ಚೆತ್ತುಕೊಳ್ಳಬೇಕು ಬಂಧನಕ್ಕೆ ಜಾತಿ, ರಾಜಕೀಯ ಬಣ್ಣ ಕೊಡಬಾರದು ಎಂದರು.
0 ಕಾಮೆಂಟ್‌ಗಳು