ವರದಿ : ಕೆ.ಎಸ್.ಪ್ರಕಾಶ್, ಪಿರಿಯಾಪಟ್ಟಣ
ಪಿರಿಯಾಪಟ್ಟಣ : ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸದೆ ಸಂಘದ ಅಭಿವೃದ್ಧಿಗೆ ಶ್ರಮಿಸಿದರೆ ಮಾತ್ರ ಸಂಘವು ಏಳಿಗೆ ಹೊಂದಲು ಸಾಧ್ಯ ಎಂದು ತಾಲ್ಲೂಕಿನ ಬಾರಸೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಸ್ವಾಮಿಗೌಡ ತಿಳಿಸಿದರು.
ಗ್ರಾಮದಲ್ಲಿ ಏರ್ಪಡಿಸಿದ್ದ ಸಂಘದ ವಾರ್ಷಿಕ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಘವು ಅಭಿವೃದ್ಧಿ ಹೊಂದಲು ಸಧ್ಯ. ಜತೆಗೆ ರೈತರು ಇನ್ನೂ ಹೆಚ್ಚು ಸಾಲ ಸೌಲಭ್ಯ ಪಡೆದುಕೊಂಡು ಆಧುನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಹೆಚ್ಚು ಸಬಲರಾಗಲು ಸಹಾಯವಾಗುತ್ತದೆ ಎಂದರು.
ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಸಭೆಗೆ ಪ್ರತಿಯೊಬ್ಬ ಸದಸ್ಯರು ಭಾಗವಹಿಸಿ ಸಂಘದ ಆಗುಹೋಗು ವಿಚಾರಗಳನ್ನು ತಿಳಿದು ಸಭೆಯಲ್ಲಿ ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಆಗ ಸಂಘದಲ್ಲಿ ಉತ್ತಮ ವ್ಯಾಪಾರ ವಹಿವಾಟುಗಳು ನಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಣಾಧಿಕಾರಿ ಬಿ.ಎನ್.ನಂದೀಶ್ ಮಾತನಾಡಿ, ೨೦೨೧-೨೨ನೇ ಸಾಲಿನಲ್ಲಿ ಸಂಘದಲ್ಲಿ ನಡೆದ ವ್ಯಾಪಾರ ವಹಿವಾಟುಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಈ ಕಳೆದ ಬಾರಿ ಸಂಘವು ರೂ.೩.೫೪ ಲಕ್ಷ ನಿವ್ವಳ ಆದಾಯ ಗಳಿಸಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಗೌರಮ್ಮ, ನಿರ್ದೇಶಕ ಎ.ಪಿ.ಲೋಕೇಶ್, ಬಾಬು ಜಾನ್, ಅಮೃತೇಶ್, ಭಾಸ್ಕರಾಚಾರ್, ಜಯಲಕ್ಷ್ಮಿ, ನಾಗೇಗೌಡ, ಕೆ.ವಾಸು, ತಮ್ಮಯ್ಯ, ಮಂಜುನಾಥ್, ಸ್ವಾಮಿಗೌಡ, ಲೋಹಿತ್, ನವ ನಿರ್ಮಾಣ ವೇದಿಕೆಯ ಸಿಗೂರು ವಿಜಯಕುಮಾರ್ ಹಾಜರಿದ್ದರು.
