೨೪ಕ್ಕೆ ಮಹಿಷ ದಸರಾ ಆಚರಿಸಿಯೇ ತೀರುತ್ತೇವೆ


 ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ : ಮಾಜಿ ಮೇಯರ್ ಪುರುಷೋತ್ತಮ್ ಕಿಡಿ 

ಮೈಸೂರು : ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಇದೇ ಸೆ. ೨೪ ರಂದು ಬೆಳಗ್ಗೆ ಚಾಮುಂಡಿಬೆಟ್ಟದ ಮಹಿಷ ಪ್ರತಿಮೆ ಬಳಿ ಮಹಿಷ ದಸರಾ ಆಚರಿಸಿಯೇ ತೀರುತ್ತೇವೆ. ಯಾರು ತಡೆಯಲು ಬಂದರೂ ನಮ್ಮ ನಿರ್ಧಾರ ಬದಲಾಗುವುದಿಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್ ಸ್ಪಷ್ಟಪಡಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಷ ದಸರಾ ಆಚರಣೆ ಯಾರಿಗೂ ಅಪಮಾನ ಮಾಡುವ ಉದ್ದೇಶ ಹೊಂದಿಲ್ಲ. ಆದರೂ ಕಳೆದ ಮೂರು ವರ್ಷಗಳಿಂದ ಪೊಲೀಸ್ ಇಲಾಖೆ ನಮ್ಮ ವಿರುದ್ಧ ದೌರ್ಜನ್ಯ ಎಸಗುತ್ತಿದೆ. ಆದರೂ ಈ ಬಾರಿ ಎಷ್ಟೇ ಅಡೆತಡೆ ಬಂದರೂ ಆಚರಿಸಲಾಗುವುದೆಂದರು.
ಮಾರನೇ ದಿನವಾದ ಸೆ. ೨೫ ರಂದು ಅಲ್ಲಿಯೇ ವೇದಿಕೆ ಕಾರ್ಯಕ್ರಮ ಸಹಾ ನಡೆಯಲಿದೆ. ಈ ವಿಷಯ ಕುರಿತಂತೆ ಸಂಸದರಿಗೂ ನಮಗೂ ಸಮರ ನಡೆಯುತ್ತಿದೆ. ನಾವು ಅವರ ಮನೆ ಎದುರು ಆಚರಿಸುತ್ತಿಲ್ಲ. ಸಾರ್ವಜನಿಕ ಜಾಗದಲ್ಲಿ ಆಚರಿಸುತ್ತಿದ್ದೇವೆ. ಹೀಗಾಗಿ ಇದಕ್ಕಾಗಿ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ ಎಂದು ಕಟುವಾಗಿ ನುಡಿದರು.
ಬಳಿಕ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೂ ಅವರು ದಸರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರಿಗೆ ನೈತಿಕತೆ ಇಲ್ಲವೇ ಎಂದು ಪ್ರಶ್ನಿಸಿದರು. 
ಇದೇ ವೇಳೆ ನಗರದ ಡಿಸಿಪಿಯವರಾದ ಪ್ರದೀಪ್‌ಗುಂಟಿ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣದಿಂದಾಗಿ ದಸರಾ ಕಾರ್ಯಕ್ರಮಗಳಿಂದ ಹೊರಗಿಡಲಾಗಿದೆ. ಇವರನ್ನು ಯಾವ ಸಮಿತಿಗೂ ನಿಯೋಜಿಸಲ್ಲ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿಯೂ ಜಾತಿ ತಾರತಮ್ಯ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ದೇಶದಲ್ಲಿ ಬೌದ್ಧರು ಒಂದು ಕಾಲದಲ್ಲಿ ಪ್ರಮುಖರಾಗಿದ್ದರು. ವಿವೇಕಾನಂದರು ಸಹಾ ತಾವು ಬೌದ್ಧರೆಂದೇ ಹೇಳಿದ್ದಾರೆ. ಆದರೂ ರಾಮಾಯಣದಲ್ಲಿ ರಾಮನ ಬಾಯಿಯಿಂದ ಬುದ್ಧ ಕಳ್ಳ ಎಂದು ಹೇಳಿಸಲಾಗಿದೆ. ಇನ್ನು, ಮಹಿಷ ಸಹಾ ಬೌದ್ಧನಾಗಿದ್ದು, ಆತ ಒಳ್ಳೆಯ ರಾಜನಾಗಿದ್ದ ಕಾರಣದಿಂದಲೇ ನಗರಕ್ಕೆ ಆತನ ಹೆಸರನ್ನು ಇರಿಸಲಾಗಿದೆ ಎಂದು ವಿವರಿಸಿದರು.
ಜವರಪ್ಪ, ಸೋಮಯ್ಯ ಮಲೆಯೂರು, ಸಿದ್ದಸ್ವಾಮಿ, ಇನ್ನಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು