ಭಾರತ್ ಕ್ಯಾನ್ಸರ್ ಆಸ್ಪತ್ರೆಯಿಂದ ’ಮೀಟರ್ ಆನ್, ತಂಬಾಕು ಆಫ್’ ಅಭಿಯಾನ, ತಂಬಾಕು ಮುಕ್ತ ಮೈಸೂರು ಆಂದೋಲನಕ್ಕೆ ಆಟೋ ಚಾಲಕರೇ ರಾಯಭಾರಿಗಳು

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸುವ ಬೃಹತ್ ಆಶಯದೊಂದಿಗೆ ಭಾರತ್ ಆಸ್ಪತ್ರೆ ಮತ್ತು ಕ್ಯಾನ್ಸರ್ ಸಂಸ್ಥೆ ’ಮೀಟರ್ ಆನ್, ತಂಬಾಕು ಆಫ್’ ಎಂಬ ವಿನೂತನ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿದೆ. 

ಸಂಸ್ಥೆಯ ಅಧ್ಯಕ್ಷರೂ ಆದ ಹಿರಿಯ ಕ್ಯಾನ್ಸರ್ ತಜ್ಞ ಡಾ. ಬಿ.ಎಸ್. ಅಜಯ್ ಕುಮಾರ್ ಅವರ ದೂರದೃಷ್ಟಿಯ ಪರಿಕಲ್ಪನೆಯಲ್ಲಿ ಈ ಸಾಮಾಜಿಕ ಜಾಗೃತಿ ಕಾರ್ಯಕ್ರಮ ರೂಪುಗೊಂಡಿದೆ. ಕ್ಯಾನ್ಸರ್ ಚಿಕಿತ್ಸೆಗೆ ಮಾತ್ರ ಸೀಮಿತವಾಗದೆ, ರೋಗ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕೆ ವಹಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಈ ಜಾಗೃತಿ ಅಭಿಯಾನದ ಭಾಗವಾಗಿ ನಗರದ ೧೦೦ಕ್ಕೂ ಹೆಚ್ಚು ಆಟೋ ಚಾಲಕರು ’ತಂಬಾಕು ಮುಕ್ತ ಮೈಸೂರು’ ಆಂದೋಲನದ ರಾಯಭಾರಿಗಳಾಗಿ ಕಾರ್ಯಾಚರಿಸಲಿದ್ದಾರೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರೊಂದಿಗೆ ಸಂಪರ್ಕ ಹೊಂದುವ ಆಟೋಗಳನ್ನು ಸಂಚಾರಿ ವೇದಿಕೆಗಳನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಚಾಲಕರು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ನೇರವಾಗಿ ಜಾಗೃತಿ ಮೂಡಿಸಲಿದ್ದಾರೆ.

ದೀರ್ಘಕಾಲದ ಚಾಲನೆ, ವಾಯುಮಾಲಿನ್ಯ ಮತ್ತು ತಂಬಾಕು ಸೇವನೆಯ ಅಭ್ಯಾಸದಿಂದ ಆಟೋ ಚಾಲಕರಲ್ಲಿ ಬಾಯಿ ಹಾಗೂ ಗಂಟಲ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ. ಇದನ್ನು ತಡೆಯಲು ಕುವೆಂಪುನಗರದ ಬಿಎಚ್‌ಐಒ ಡೇ ಕೇರ್ ಸೆಂಟರ್ನಲ್ಲಿ ಆಗಸ್ಟ್ ೧೯ರಿಂದ ೩೧ರವರೆಗೆ ಆಟೋ ಚಾಲಕರು ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ತಂಬಾಕು ಸೇವನೆ ಬಿಡಲು ಉಚಿತ ವೈದ್ಯಕೀಯ ಆಪ್ತಸಲಹೆ ನೀಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ. ಅವಿನಾಶ್ ಸಿ.ಬಿ, ಆಸ್ಪತ್ರೆಗೆ ಬರುವ ಶೇ. ೩೩ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ಸೇವನೆಯೇ ನೇರ ಕಾರಣವಾಗಿದ್ದು, ಬೀಡಿ, ಸಿಗರೇಟ್, ಗುಟ್ಕಾ ಮುಂತಾದ ಯಾವುದೇ ರೂಪದ ತಂಬಾಕೂ ಅತ್ಯಂತ ಅಪಾಯಕಾರಿ ಎಂದರು. 

ಹಿರಿಯ ರೇಡಿಯೇಷನ್ ಆಂಕೊಲಾಜಿಸ್ಟ್ ಡಾ. ವಿನಯ್ ಕುಮಾರ್ ಮುಟ್ಟಗಿ ಮಾತನಾಡಿ, ತಂಬಾಕು ೨೦ಕ್ಕೂ ಹೆಚ್ಚು ವಿಧದ ಕ್ಯಾನ್ಸರ್ಗಳಿಗೆ ಕಾರಣವಾಗಿದ್ದು, ಮುಂದಿನ ೧೦ ವರ್ಷಗಳಲ್ಲಿ ತಂಬಾಕು ಮುಕ್ತ ಸಮಾಜ ನಿರ್ಮಿಸಲು ಆಟೋ ಚಾಲಕರು ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಮೂಲಕ ಈ ಆರೋಗ್ಯ ಸಂದೇಶದ ಸಾರಥಿಗಳಾಗಬೇಕು ಎಂದು ಕರೆ ನೀಡಿದರು.

ನಿಯಮಿತ ತಪಾಸಣೆ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಮೆಡಿಕಲ್ ಮತ್ತು ಹೆಮಟೊ ಆಂಕೊಲಾಜಿಸ್ಟ್ ಹಾಗೂ ಮೂಳೆ ಮಜ್ಜೆ ಕಸಿ ತಜ್ಞ ಡಾ. ಸಂತೋಷ್ ಕುಮಾರ್ ಕೆ.ಎನ್. ಮತ್ತು ಹಿರಿಯ ಸರ್ಜಿಕಲ್ ಆಂಕೊಲಾಜಿಸ್ಟ್ ಹಾಗೂ ರೋಬೋಟಿಕ್ ಸರ್ಜನ್ ಡಾ. ವಿಜಯ್ ಕುಮಾರ್ ತಿಳಿಸಿದರು. ಬಿಎಚ್‌ಐಒ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌತಮ್ ಧಮೇರ್ಲ ಮಾತನಾಡಿ, ಆಟೋ ಚಾಲಕರು ನಗರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು; ಆದ್ದರಿಂದಲೇ ತಂಬಾಕಿನ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಅವರನ್ನು ರಾಯಭಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದರು