ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಎನ್.ಭಾಸ್ಕರ್ ನೇಮಿಸಬೇಕೆಂದು ವಿವಿಧ ಸಮಾಜದ ಮುಖಂಡರ ಒತ್ತಾಯ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು: ಕೆಪಿಸಿಸಿ ಸಂಯೋಜಕ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಎನ್.ಭಾಸ್ಕರ್ ಅವರನ್ನು ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಆಗ್ರಹಿಸಿ ವಿವಿಧ ಸಮಾಜಗಳ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ. 

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಹಿಂದ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪ ನಾಯಕ ಮಾತನಾಡಿ, ಸುಮಾರು ೩೫ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ, ಪ್ರಾಮಾಣಿಕವಾಗಿ ದುಡಿಯುತ್ತಿರುವ ಎನ್. ಭಾಸ್ಕರ್ ಅವರು ರಾಜಕೀಯ ಇತಿಹಾಸದಲ್ಲಿ ಒಂದೇ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. 

ಯಾವುದೇ ಪಕ್ಷಕ್ಕೂ ಹೋಗದೆ, ಜತೆಗೆ ಪಕ್ಷ ಕೊಡುವ ಜವಾಬ್ದಾರಿಗಳನ್ನು ಭಾರೀ ಪ್ರಾಮಾಣಿಕತೆಯಿಂದ ಹಾಗೂ ದಕ್ಷತೆ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅವರನ್ನು ಬೇರೆ ಬೇರೆ ಜಿಲ್ಲೆಗೆ ಉಸ್ತುವಾರಿಯಾಗಿ ಹಾಗೂ ವೀಕ್ಷಕರಾಗಿ ಹಾಕಿದ ಸಂದರ್ಭದಲ್ಲೂ ಸಹ ಪಕ್ಷ ನಿಷ್ಠೆಯಿಂದ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಯೋಜಕರಾಗಿಯೂ ದುಡಿಯುತ್ತಿದ್ದಾರೆ ಎಂದರು. 

ಎನ್.ಭಾಸ್ಕರ್ ಅವರ ಸೇವಾ ಹಿರಿತನವನ್ನು ಹಾಗೂ ಪಕ್ಷ ನಿಷ್ಠೆಯನ್ನು ಪರಿಗಣಿಸಿ ಹಾಗೂ ಹೈಕಮಾಂಡ್ ಕೊಡುವ ಕೆಲಸ ಕಾರ್ಯಗಳನ್ನು ಚಾಚೂ ತಪ್ಪದೆ ಕಾಲಮಿತಿಯೊಳಗೆ ಪೂರ್ಣಗೊಳಿಸುತ್ತಿದ್ದಾರೆ. ಆದ್ದರಿಂದ ಎನ್.ಭಾಸ್ಕರ್ ಅವರನ್ನು ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದರು. 

ವಕೀಲ ತಿಮ್ಮಯ್ಯ ಮಾತನಾಡಿ, ಎಲ್ಲಾ ವರ್ಗದವರಿಗೂ ಕೂಡ ಮೈಸೂರು ನಗರದ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಇಷ್ಟು ವರ್ಷಗಳಾದರು ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಈ ಹಿಂದೆ ದಲಿತರಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಯಕ ಸಮಾಜದವರು ಕಾಯುತ್ತಿದ್ದರು. ಆದರೆ ನಮಗೆ ಅನ್ಯಾಯವಾಗಿದೆ ಎಂದರು. 

ಕಾಂಗ್ರೆಸ್ ಹಿರಿಯ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ತಪ್ಪಿಸಿ ಕಾಂಗ್ರೆಸ್ ಮತ್ತೊಮ್ಮೆ ಅನ್ಯಾಯ ಮಾಡಿದೆ. ಮೈಸೂರು ಭಾಗದಲ್ಲಿ ದಲಿತ ನಾಯಕರಿಗೆ ಅಧಿಕಾರ ಕೊಡುವುದರಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಆದ್ದರಿಂದ ೨೦೨೮ರ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಅನ್ನು ಬೆಂಬಲಿಸಬೇಕೆಂದರೆ ದಲಿತರಿಗೆ ನಾಯಕತ್ವ ನೀಡುವುದು ಅನಿವಾರ್ಯತೆ ಇದೆ. ಹೀಗಾಗಿ ಎನ್.ಭಾಸ್ಕರ್ ಅವರಿಗೆ ನಗರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕು. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. 

ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ಮಾತನಾಡಿ, ಎನ್.ಭಾಸ್ಕರ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ತನು, ಮನ ಹಾಗೂ ದನವನ್ನು ಅರ್ಪಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಇವರ ಸೇವಾ ನಿಷ್ಠೆಯನ್ನು ಪರಿಗಣಿಸಿ ನಗರ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದರು. 

ಆದಿ ಕರ್ನಾಟಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ. ಮುರುಳಿ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ  ಸುರೇಶ, ವೀರಶೈವ ಮುಖಂಡರಾದ ಮಲ್ಲೇಶ್ (ಮಲ್ಲು), ಮುಸ್ಲಿಂ ಸಮುದಾಯದ ಮುಖಂಡರಾದ ನಾಸೀರ್, ಕ್ರಿಶ್ಚಯನ್ ಸಮುದಾಯದ ಮುಖಂಡರ ರಾಬರ್ಟ್, ವಿಶ್ವಕರ್ಮ ಸಮಾಜದ ಚಂದ್ರು ವಿಶ್ವಕರ್ಮ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕೆ.ಗಂಗಾಧರ್, ವಕೀಲ ಎ.ಆರ್. ಕಾಂತರಾಜು,  ಮರಾಠ ಸಮುದಾಯದ ಮುಖಂಡ ಪ್ರಕಾಶ್, ಕುಂಬಾರ ಸಮುದಾಯದ ಮುಖಂಡ ಶಿವರಾಜ್, ಮಡಿವಾಳ ಸಮಾಜದ ಮುಖಂಡ ಮಲ್ಲೇಶ್, ವಕೀಲ ಪುಟ್ಟರಸ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಸಂಘದ ಅಧ್ಯಕ್ಷ ಜಿ ಮಹದೇವ್ ಹಾಜರಿದ್ದರು


ಎನ್.ಭಾಸ್ಕರ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಮೂಲಕ ಪಕ್ಷವನ್ನು ಕಟ್ಟುತ್ತಿದ್ದಾರೆ. ಎಸ್ಸಿ ಸಮುದಾಯದಿಂದ ಇಲ್ಲಿಯವರೆಗೆ ನಗರಾಧ್ಯಕ್ಷರನ್ನಾಗಿ ಯಾರನ್ನೂ ನೇಮಕ ಮಾಡಿಲ್ಲ. ಎಸ್ಸಿ ಸಮಾಜದವರಿಗೆ ಏನಾದರೂ ಅಧ್ಯಕ್ಷ ಸ್ಥಾನ ನೀಡಿದರೆ ಅದು ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯಕ್ಕೆ ಗೌರವ ತಂದು ಕೊಡುತ್ತದೆ.


ಸತ್ಯನಾರಾಯಣ, ಕರ್ನಾಟಕ ರಾಜ್ಯ ಮಡಿವಾಳ ಸೇವಾ ಸಂಘದ ರಾಜ್ಯಾಧ್ಯಕ್ಷರು