ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ಸಮಾಜದಲ್ಲಿ ಏಕತೆ, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸುವ ಉದ್ದೇಶದಿಂದ ದಿ ಮೆಸೆಂಜರ್ ಪಾತ್ ಸಂಘಟನೆ ಮತ್ತು ನಗರದ ಬಡಾ ಮಕಾನ್‌ನಲ್ಲಿರುವ ಮಸ್ಜಿದೇ ಅಬೂಬಕರ್ ಮಸೀದಿಯಲ್ಲಿ ಮುಸ್ಲಿಮೇತರ ಸಾರ್ವಜನಿಕರಿಗಾಗಿ ಏರ್ಪಡಿಸಿದ್ದ ಮಸೀದಿ ಸಂದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಮಾರಂಭದಲ್ಲಿ ಭಾಗವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಮುಸ್ಲೀಮೇತರ ಹೊಸ ಪೀಳಿಗೆಯ ಯುವ ಜನಾಂಗದವರಲ್ಲಿ ಮುಸಲ್ಮಾನರ ಪ್ರಾರ್ಥನಾ ಮಂದಿರಗಳಾದ ಮಸೀದಿಗಳು ಎಂದರೆ ಭಯದ ವಾತಾವರಣ ಸೃಷ್ಟಿಸುವ ತಾಣಗಳು ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಾರ್ವಜನಿಕರಲ್ಲಿ ಅಪಪ್ರಚಾರ ಮಾಡುವ ಮೂಲಕ ಮಸೀದಿಗಳ ಬಗ್ಗೆ ತೇಜೋವಧೆ ಮಾಡಲಾಗುತ್ತಿದೆ. ಈ ಮನೋಭಾವನೆಯನ್ನು ಹೋಗಲಾಡಿಸಲು ಇಂದು ಈ ಮಸೀದಿಯಲ್ಲಿ ಮುಸ್ಲಿಮೇತರರಿಗಾಗಿ ನಾವು ಸಾರ್ವಜನಿಕ ಸಂದರ್ಶನವನ್ನು ಏರ್ಪಡಿಸಿ ಇಲ್ಲಿ ನಡೆಯುವ ಪ್ರಾರ್ಥನೆಗಳು, ನಮಾಜಿನ ವಿಧಾನ, ಮಸೀದಿಯ ಕಾರ್ಯಕಲಾಪಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ನಡೆಸಿ ಅವರಲ್ಲಿ ಮಸೀದಿಯ ಬಗ್ಗೆ ಇದ್ದ ಭಯದ ವಾತಾವರಣ ಹೋಗಲಾಡಿಸುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ಯಾವುದೇ ರೀತಿಯ ಅಪಾಯಕಾರಿ ವಸ್ತುಗಳಿಲ್ಲ, ದ್ವೇಷದ ಬೋಧನೆ ಮಾಡುವುದಿಲ್ಲ ಎನ್ನುವುದನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಲು ಮುಸ್ಲೀಮೇತರರಿಗೆ ಮಸೀದಿ ಸಂದರ್ಶನ ಏರ್ಪಡಿಸಲಾಗಿದೆ. ಇನ್ನು ಮುಂದೆ ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಮಸೀದಿಗಳಲ್ಲೂ ಸಾರ್ವಜನಿಕ ಸಂದರ್ಶನ ಏರ್ಪಡಿಸಿ ಸೌಹಾರ್ಧತೆ ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಮಾಜಿ ಮೇಯರ್ ಆರೀಫ್ ಹುಸೇನ್ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಮುಸಲ್ಮಾನರಿಗೆ ಇರುವಷ್ಟು ಮಾನ್ಯತೆ, ಇತರೆ ಸಮಾಜದವರಿಗೂ ಇದೆ. ಮಸೀದಿ ಮುಸಲ್ಮಾನರ ಸ್ವತ್ತಲ್ಲ, ಸಾರ್ವಜನಿಕರ ಸ್ವತ್ತು, ಮಹಿಳೆಯರಾದಿಯಾಗಿ ಎಲ್ಲರೂ ಇಲ್ಲಿಗೆ ಬರಬಹುದು. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಅದು ಕಾರ್ಯಗತವಾದರೆ ತಿಂಗಳಿಗೆ ಒಂದು ವಾರ ಕನ್ನಡದಲ್ಲಿ ಪ್ರಾರ್ಥನೆ ಮಾಡಿಸಲಾಗುವುದು ಎಂದರು.
ಮೈಸೂರು ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಮಲ್ಲೇಶ್ ಮಾತನಾಡಿ, ಇಡೀ ವಿಶ್ವದಲ್ಲಿ ದೇವರೊಂದೆ ನಾಮ ಹಲವು ಎನ್ನುವುದನ್ನು ನಾವು ಅರ್ಥ ಮಾಡಬೇಕು. ಪೂಜೆ ಮತ್ತು ಪ್ರಾರ್ಥನಾ ವಿಧಾನಗಳು ಬೇರೆ ಬೇರೆ ಇರಬಹುದು. ಕೆಲವು ದುಷ್ಟ ಶಕ್ತಿಗಳು ಸಮಾಜದಲ್ಲಿ ಅಶಾಂತಿಯನ್ನು ಮತ್ತು ಒಡಕನ್ನು ಉಂಟು ಮಾಡಲು ನಮ್ಮಗಳ ನಡುವೆ ಗೋಡೆಗಳನ್ನು ಸೃಷ್ಟಿ ಮಾಡಿದ್ದಾರೆ. ನಾವು ಆ ಗೋಡೆಗಳನ್ನು ಒಡೆದು ಶಾಂತಿಯನ್ನು ಸೃಷ್ಟಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ.ಇಬ್ರಾಹಿಂ ಮತ್ತು ಮಾಜಿ ಮೇಯರ್ ಆರೀಫ್ ಹುಸೇನ್ ಸಮಾಜದಲ್ಲಿ ಭಾತೃತ್ವ ಮೂಡಿಸಲು ಮಸೀದಿ ದರ್ಶನ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಮುಸ್ಲೀಮೇತರ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು, ಅವರೆಲ್ಲರಿಗೂ ಇಸ್ಲಾಂ ಧರ್ಮದ ರೀತಿ ರಿವಾಜುಗಳ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಮಸೀದಿಯ ಸಂಪೂರ್ಣ ದರ್ಶನ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಮಸೀದಿಯ ಧರ್ಮಗುರುಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಇದ್ದರು.

