ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಿಸಿದ ಯದುವೀರ್ : ನಾಡ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ವಿವಿಧೆಡೆ ಅನ್ನಸಂತರ್ಪಣೆಗೆ ಚಾಲನೆ

 ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ರಾಜವಂಶಸ್ಥರೂ ಆದ ಮೈಸೂರು-ಕೊಡಗು ಸಂದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ದಿನಪೂರ್ತಿ ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ ಮಾಡಿದರು.

ಗುರುವಾರ ಬೆಳಗ್ಗೆ ೮.೩೦ಕ್ಕೆ ಅವರು ಚಾಮುಂಡಿಬೆಟ್ಟಕ್ಕೆ ತೆರಳಿ ನಾಡ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶೇಷ ಅಧಿಕಾರಿ ರೂಪ ಮತ್ತು ದೇವಾಲಯದ ಪ್ರಧಾನ ಅರ್ಚಕರಾದ ಶಶಿಧರ ದೀಕ್ಷಿತ್ ಅವರು ಹಾಜರಿದ್ದು, ದೇವಾಲಯ ಸಮಿತಿಯಿಂದ ಅವರಿಗೆ ವೈಭವನದ ಸ್ವಾಗತ ಕೋರಲಾಯಿತು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ದೇವಾಲಯದ ಎದುರು ನೂರಾರು ಭಕ್ತರಿಗಾಗಿ ಏರ್ಪಡಿಸಿದ್ದ ಅನ್ನಸಂತರ್ಪಣೆಗೆ ಚಾಲನೆ ನೀಡಿ, ಕೆಲ ಕಾಲ ತಾವೇ ಸ್ವತಃ ಅನ್ನಬಡಿಸಿ ಸಾರ್ವಜನಿಕರ ಗಮನ ಸೆಳೆದರು.

ನಂತರ ಅವರು, ನಗರದ ಕೆ.ಆರ್. ವೃತ್ತದಲ್ಲಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.

ಪುಷ್ಪಾರ್ಚನೆಯ ನಂತರ ಅವರು ಮೈಸೂರು ನಗರದಾದ್ಯಂತ ಆಯೋಜಿಸಲಾದ ವಿವಿಧ ಅನ್ನ ಸಂತರ್ಪಣೆ ಕೇಂದ್ರಗಳಿಗೆ ಭೇಟಿ ನೀಡಿದರು. ಮೈಸೂರಿನಾದ್ಯಂತ ೪೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸುಮಾರು ೨೫,೦೦೦ಕ್ಕೂ ಹೆಚ್ಚು ಜನರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಯದುವೀರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಮಾಜದಲ್ಲಿ ಯಾವುದೇ ಧರ್ಮ ಅಥವಾ ನಂಬಿಕೆ ಇದ್ದರೂ ಎಲ್ಲರಲ್ಲೂ ಪರಸ್ಪರ ಹೊಂದಾಣಿಕೆ ಮತ್ತು ಸೇವಾ ಮನೋಭಾವನೆ ಇರುವುದು ಅತ್ಯಂತ ಮುಖ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ ಮತ್ತು ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ವ್ಯಕ್ತಪಡಿಸಿದರು.

ಇಂದು ಕರ್ನಾಟಕವು ಒಂದು ಪ್ರಗತಿಪರ ರಾಜ್ಯವಾಗಿ ಗುರುತಿಸಿಕೊಂಡಿರುವುದಕ್ಕೆ ಅನೇಕ ನಾಯಕರ ಕೊಡುಗೆ ಇದೆ. ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಸಾಧನೆಗಳು ಅತ್ಯಂತ ಪ್ರಮುಖವಾದವು. ಅವರ ಈ ಸಾಧನೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸುವರ್ಣ ಮೈಸೂರಿನಂತೆ ಒಂದು ಅಭಿವೃದ್ಧಿ ಹೊಂದಿದ ಕರ್ನಾಟಕವನ್ನು ನಿರ್ಮಿಸುವುದೇ ನಾಲ್ವಡಿ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ. ಅವರ ಮೌಲ್ಯಗಳನ್ನು ಮತ್ತು ತತ್ವಗಳನ್ನು ಮುಂಬರುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಮುಖಂಡರು ಭಾಗವಹಿಸಿದ್ದರು.