ಮೈಸೂರು : ಇಲ್ಲಿನ ನರಸಿಂಹರಾಜ ಕ್ಷೇತ್ರದಲ್ಲಿ ಸತತವಾಗಿ 6 ಬಾರಿ ಶಾಸಕರಾಗಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಶಾಸಕ ತನ್ವೀರ್ ಸೇಠ್ ಅವರಿಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಪ್ರಭಲ ಖಾತೆಯೊಂದಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಡಿಸಿಸಿ ಉಪಾಧ್ಯಕ್ಷರಾದ ಎನ್.ಮಾದೇಗೌಡ ಆಗ್ರಹಿಸಿದರು.
ನಗರದ ಕೆಸರೆ ಬಡಾವಣೆಯಲ್ಲಿರುವ ತಮ್ಮ ಕಚೇರಿ ಎದುರು ಭಾನುವಾರ ನಡೆದ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಹಕ್ಕೊತ್ತಾಯ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ತನ್ವೀರ್ ಸೇಠ್ ಅವರು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ತುಮಕೂರು ಜಿಲ್ಲೆಗಳಲ್ಲಿ ಗೆದ್ದ ಕಾಂಗ್ರೆಸ್ ಶಾಸಕರ ಪೈಕಿ ಏಕೈಕ ಮುಸ್ಲಿಂ ಶಾಸಕರಾಗಿದ್ದಾರೆ. ಸತತವಾಗಿ 6 ಬಾರಿ ಚುನಾಯಿತರಾಗಿದ್ದಾರೆ. ವಿಧಾನಸಭೆಯ ಹಿರಿಯ ಸದಸ್ಯರು, 2 ಬಾರಿ ಸಚಿವರೂ ಆಗಿ ಅನುಭವ ಅವರಿಗಿದೆ. ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಯಾವುದೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಕಳಂಕ ಅವರಿಗಿಲ್ಲ, ನರಸಿಂಹರಾಜ ಕ್ಷೇತ್ರದಲ್ಲಿ ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಂಡು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಎಲ್ಲ ಜಾತಿ ಧರ್ಮದವರ ಪ್ರೀತಿ ಗಳಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಯಾವುದೇ ಕೋಮುಗಲಭೆಗೆ ಅವರು ಅವಕಾಶ ನೀಡಿಲ್ಲ, ಎಲ್ಲ ಸಮಸ್ಯೆಗಳನ್ನು ಶಾಂತಿ ಮತ್ತು ಸೌಹಾರ್ಧವಾಗಿ ಬಗೆಹರಿಸಿದ್ದಾರೆ. ಕ್ಷೇತ್ರದ ಜನರು ಅವರನ್ನು ಅಪಾರವಾಗಿ ಪ್ರೀತಿಸುತ್ತಾರೆ. ಎನ್‌ಆರ್ ಕ್ಷೇತ್ರದಲ್ಲಿ ಅನೇಕ ಶಾಲಾ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಇಲ್ಲ ಶಿಕ್ಷಣಕ್ಕೆ ಮಹತ್ವ ನೀಡಿದ್ದಾರೆ. ಇಂತಹ ಅನುಭವಿ ರಾಜಕಾರಣಿಗೆ ಭಾವಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟದಲ್ಲಿ ಉತ್ತಮ ಸ್ಥಾನ ಕಲ್ಪಿಸಬೇಕು. ಜೂನ್.3 ರಂದು ನಡೆಯುವ ಪ್ರಮಾಣವಚನ ಸಮಾರಂಭದಲ್ಲಿ ತನ್ವೀರ್ ಸೇಠ್ ಸಚಿವರಾಗಬೇಕು. ಇಲ್ಲದಿದ್ದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಎಕ್ಬಾಲ್ ಮಾತನಾಡಿ, ಈಗಾಗಲೇ ಭಾವಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಂಪುಟದಲ್ಲಿ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನಮಗೆ ಮುನ್ಸೂಚನೆ ಇದೆ, ಅವರ ಅನುಭವಕ್ಕೆ ತಕ್ಕಂತೆ ಅವರನ್ನು ಡಿಸಿಎಂ ಮಾಡಬೇಕು. ಇದರಿಂದ ರಾಜ್ಯದಲ್ಲಿ ನಂ. ಒಂದನೇ ಸ್ಥಾನದಲ್ಲಿರುವ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ಸಾಹಿತಿ, ಕಾಂಗ್ರೆಸ್ ಮುಖಂಡ ರಾಚಪ್ಪ ಮಾತನಾಡಿ, ತನ್ವೀರ್ ಸೇಠ್ ಒಬ್ಬ ಸುಸಂಸ್ಕೃತ ರಾಜಕಾರಣಿ, ಯಾವುದೇ ಜಾತಿ, ಪಂಗಡ, ಧರ್ಮ ಬೇಧ ಮಾಡದೆ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. 6 ಬಾರಿ ಶಾಸಕರಾಗಿ 2 ಬಾರಿ ಸಚಿವರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಅನುಭವಿ ರಾಜಕಾರಣಿ, ಹಲವು ಚುನಾವಣೆಗಳ ನೇತೃತ್ವವಹಿಸಿ ಗೆಲುವು ಕಂಡಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದು ಹೈಕಮಾಂಡ್ ಜವಾಬ್ದಾರಿ ಎಂದರು.
ಇದೇ ವೇಳೆ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾರ್ಯಕರ್ತರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರ ಜತೆ ಕೆಪಿಸಿಸಿ ಸಂಯೋಜಕರಾದ ಶೌಕತ್ ಅಲಿಖಾನ್, ನಗರ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್, ಮುಖಂಡರಾದ ಶ್ರೀನಿವಾಸ್, ಕೃಷ್ಣೇಗೌಡ, ರಾಮಕೃಷ್ಣೇಗೌಡ, ಪಾಷ, ಲೋಕೇಶ್, ಮಹೇಶ್, ವಿಶ್ವನಾಥ್ ಮತ್ತಿತರರು ಇದ್ದರು.



