ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ಮುಖ್ಯಮಂತ್ರಿ ಸ್ಥಾನಕ್ಕೆ ಜನನಾಯಕರು ಮತ್ತು ಅಹಿಂದಾ ವರ್ಗಗಳ ನೇತಾರರಾದ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬಳಿಕ ಅಹಿಂದ ಸಮುದಾಯದಲ್ಲಿ ಒಂದು ದೊಡ್ಡ ಅಂತರ ಸೃಷ್ಟಿಯಾಗಿದ್ದು, ಇದನ್ನು ತುಂಬಲು ನೂತನ ಸರ್ಕಾರದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅಹಿಂದಾ ಸಂಘಟನೆ ಆಗ್ರಹಿಸಿದೆ.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಅಹಿಂದಾ ಮುಖಂಡ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಡೆಸಿದ ಸಭೆಯಲ್ಲಿ ಮುಖಂಡರು ಮಾತನಾಡಿ, ಸಿದ್ದರಾಮಯ್ಯ ಅವರು ಶೋಷಿತ ಸಮುದಾಯದ ನೇತಾರರಾಗಿದ್ದರು, ಬಡವರ ನಾಡಿಮಿಡಿತ ಅವರಿಗೆ ಚೆನ್ನಾಗಿ ಗೊತ್ತಿತ್ತು, ಇದರಿಂದ ಅವರು ಅನ್ನಭಾಗ್ಯ, ಕ್ಷೀರಭಾಗ್ಯ, ಗೃಹಲಕ್ಷಿö್ಮ, ಗೃಹಜ್ಯೋತಿ, ಯುವನಿಧಿ ಮುಂತಾದ ಯೋಜನೆಗಳನ್ನು ಜಾರಿಗೆ ತಂದರು. ಇದೀಗ ಅವರ ರಾಜೀನಾಮೆಯಿಂದ ಸೃಷ್ಟಿಯಾಗಿರುವ ಅಹಿಂದಾ ಸಮುದಾಯದಲ್ಲಿನ ಅಂತರ ತುಂಬಲು ಮತ್ತು ಅಹಿಂದ ಸಮುದಾಯಗಳ ನಾಯಕತ್ವದ ದೃಷ್ಟಿಯಿಂದಲೂ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿಯ ಹುದ್ದೆಯ ಜೊತೆಗೆ ಪ್ರಬಲ ಖಾತೆ ನೀಡಬೇಕು ಎಂದು ಸಭೆ ಒಕ್ಕೊರಲಿನಿಂದ ಆಗ್ರಹಿಸಿತು.
ಸಭೆಯಲ್ಲಿ ಕುರುಬ, ಮಡಿವಾಳ, ವಿಶ್ವಕರ್ಮ, ಬೆಸ್ತ, ನಾಯಕ, ಉಪ್ಪಾರ, ಕುಂಬಾರ, ಅಲ್ಪಸಂಖ್ಯಾತ, ಕ್ರೆöÊಸ್ತ ಸೇರಿದಂತೆ ಸೂಕ್ಷ÷್ಮ ಸಮುದಾಯಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಅಹಿಂದ ಸಮುದಾಯದ ರಾಜಕೀಯ ನಾಯಕತ್ವವನ್ನು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂಬAಧ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುವ ನಿರ್ಣಯವನ್ನೂ ಸಹ ಸಭೆ ಕೈಗೊಂಡಿತು.
ಅಹಿAದ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಹೋರಾಟ ಮುಂದುವರಿಯಬೇಕಾದರೆ ಯಂತೀAದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನವಾನ ನೀಡುವುದು ಅನಿವಾರ್ಯ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಅಹಿಂದ ಮತಗಳನ್ನು ಕಡೆಗಣಿಸಿದ ಪಕ್ಷಗಳು ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಸ್ವಾತಂತ್ರ÷್ಯದ ನಂತರವೂ ಅಹಿಂದ ಸಮುದಾಯಗಳಿಗೆ ಸಮಾನ ಅವಕಾಶ, ಸ್ಥಾನಮಾದ ಸಿಕ್ಕಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಮತಗಳು ಬೇಕು ಎಂದರೆ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಸಭೆಯ ಮೂಲಕ ಎಚ್ಚರಿಕೆ ರವಾನಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಶೋಷಿತ ಸಮುದಾಯಗಳಿಗೆ ಅಘಾತ ತಂದೊಡ್ಡಿದೆ. ಸ್ವಜನ ಪಕ್ಷಪಾತ, ಸ್ವಜಾತಿಯ ವ್ಯಾಮೋಹದಲ್ಲಿ ಸಿದ್ದರಾಮಯ್ಯ ಅವರು ಎಂದಿಗೂ ಆಡಳಿತ ನಡೆಸಿಲ್ಲ. ಜನರ ಕಲ್ಯಾಣಕ್ಕಾಗಿ ಇಡೀ ರಾಜಕೀಯ ಜೀವನವನ್ನೆ ಮುಡಿಪಾಗಿಟ್ಟರು. ದೇಶದ ಬಡವರ, ಅಹಿಂದ ವರ್ಗಗಳ ಪರವಾಗಿ ನಿಲ್ಲುವ ಕಾಂಗ್ರೆಸ್ ಪಕ್ಷ ಉಳಿಯಬೇಕು, ಅಧಿಕಾರದಲ್ಲಿ ಮುಂದುವರಿಯಬೇಕು ಎಂದರೆ ಸಿದ್ದರಾಮಯ್ಯ ಅವರ ನಾಯಕತ್ವ ಅನಿವಾರ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಿಸುವುದು ಕುಟುಂಬ ರಾಜಕಾರಣವಲ್ಲ. ತಂದೆ-ಮಗ-ಮೊಮ್ಮಗ, ಮಗ ಪತ್ನಿ, ಅಳಿಯರು ರಾಜಕೀಯದಲ್ಲಿ ಅಧಿಕಾರ ಅನುಭವಿಸುವುದೆ ಕುಟುಂಬ ರಾಜಕಾರಣ ಎಂದು ಟೀಕಿಸಿದರು.
ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಆದರೆ, `ಇದು ತಂದೆ-ಮಗನ ವಿಚಾರವಲ್ಲ. ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಪ್ರಶ್ನೆ. ಡಾ. ಯತೀಂದ್ರ ಸಿದ್ದರಾಮಯ್ಯ ವಿದ್ಯಾವಂತರು, ಸಾಮಾಜಿಕ ಕಾಳಜಿ ಹೊಂದಿರುವವರು. ಅವರಿಗೆ ನಾಯಕತ್ವದ ಅವಕಾಶ ನೀಡುವುದು ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ಜಿಲ್ಲಾ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಉಪ್ಪಾರ್ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ಮಗನಿಗೆ ಸಚಿವ ಸ್ಥಾನ ನೀಡುವುದು ಬೇಡ ಎಂದು ಹೇಳುತ್ತಿರುವುದು ಅವರ ವೈಯುಕ್ತಿಕ ನಿಲುವು. ಆದರೆ ಅಹಿಂದ ಸಮುದಾಯಗಳ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗಿದೆ. ಅವರು ಅಹಿಂದ ಸಮುದಾಯಗಳ ಪ್ರತಿನಿಧಿಯಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ವಿಶ್ವಕರ್ಮ ಸಮುದಾಯದ ಮೊಗಣ್ಣಾಚಾರ್ ಮಾತನಾಡಿ, ರಾಜ್ಯದಲ್ಲಿ ನಾಲ್ಕು ಕೋಟಿ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ನಂಬಿದ್ದಾರೆ. ಸೂಕ್ಷ÷್ಮ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಎಂಬ ನಿರೀಕ್ಷೆ ಅವರ ಮೇಲಿನ ವಿಶ್ವಾಸಕ್ಕೆ ಕಾರಣ. ಆದರೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮ್ಯ ಅವರನ್ನು ಕೆಳಗಿಳಿಸಿರುವುದು ಅಹಿಂದ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಮಂಜು ಶೆಟ್ಟಿ ಮಾತನಾಡಿ, ಅಹಿಂದ ಮತಗಳನ್ನು ಕಡೆಗಣಿಸುವ ಯಾವುದೇ ಪಕ್ಷ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಕಾಂಗ್ರೆಸ್‌ಗೆ ಅಹಿಂದ ಸಮುದಾಯಗಳ ಬೆಂಬಲ ಮುಂದುವರಿಯಬೇಕಾದರೆ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು ಎಂದರು.
ಅಹಿಂದ ಮುಖಂಡ ಪುಟ್ಟಸ್ವಾಮಿ ಮಾತನಾಡಿ, ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಸಿದ್ಧವಿದೆ ಎಂಬ ಮಾಹಿತಿ ಇದೆ. ಆದರೆ ನಾವು ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಸಾಮಾಜಿಕ ನ್ಯಾಯದ ಹರಿಕಾರರಾಗಿರುವ ಸಿದ್ದರಾಮಯ್ಯ ಅವರು ತಮ್ಮ ಮಗನಿಗೆ ಹುದ್ದೆ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಜನರೇ ಅವರ ಮೇಲೆ ಒತ್ತಡ ತರಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ರವಿನಂದನ್, ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ದಲಿತ ಮಹಾಸಭಾದ ಅಧ್ಯಕ್ಷ ರಾಜೇಶ್, ಅಹಿಂದ ಒಕ್ಕೂಟದ ರಾಷ್ಟಿçÃಯ ಅಧ್ಯಕ್ಷ ಶಿವಣ್ಣ, ಚೆನ್ನಪ್ಪ, ಕೃಷ್ಣ, ಚಂದ್ರು, ಲೋಕೇಶ್ ಕುಮಾರ್ ಮಾದಾಪುರ, ವಿಶ್ವಕರ್ಮದ ಮುಖಂಡ ಕೆಂಡಗಣ್ಣ, ಕಾಳೇಗೌಡ, ಮಹದೇವಮ್ಮ, ಜಯಲಕ್ಷಿ÷್ಮÃ, ಛಾಯಾಮ್ಮ, ದೇವನೂರು ಮಹಾದೇವಮ್ಮ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಾತಿ ಗಣತಿ ಜಾರಿ ಆಗದಿದ್ದರೆ ಕಾಂಗ್ರೆಸ್ ವಿರುದ್ಧ ತಂತ್ರಗಾರಿಕೆ
ಜಾತಿ ಜನಗಣತಿ ವರದಿಯನ್ನು ತಕ್ಷಣ ಬಿಡುಗಡೆ ಮಾಡಿ ಅನುಷ್ಠಾನಗೊಳಿಸಬೇಕು. ವರದಿಯಲ್ಲಿರುವ ಶಿಫಾರಸುಗಳನ್ನು ಜಾರಿಗೆ ತರದೆ ಹೋದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ರಾಜಕೀಯ ತಂತ್ರಗಾರಿಕೆ ರೂಪಿಸಲಾಗುವುದು ಎಂದು ಸ¨sಯಲ್ಲಿ ಮುಖಂಡರು ಎಚ್ಚರಿಕೆ ನೀಡಿದರು. ಅಹಿಂದ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಹಾಗೂ ಸಮರ್ಪಕ ಪ್ರಾತಿನಿಧ್ಯ ದೊರಕಬೇಕು ಎಂಬುದು ಸಭೆಯ ಪ್ರಮುಖ ಆಗ್ರಹವಾಗಿತ್ತು.
ಸಭೆ ನಿರ್ಣಯಗಳು:
ಕೆ.ಎಸ್.ಶಿವರಾಮ್ ಅವರು ಸಭೆಯಲ್ಲಿ ಐದು ನಿರ್ಧಾರಗಳನ್ನು ಕೈಗೊಂಡು ಮಂಡಿಸಿದರು. ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ, ಪ್ರಭಾವಿ ಖಾತೆ ನೀಡಬೇಕು. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ತಕ್ಷಣ ಬಿಡುಗಡೆ ಮಾಡಿ ಅನುಷ್ಠಾನಗೊಳಿಸಬೇಕು.
ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸಚಿವ ಸಂಪುಟದಲ್ಲಿ ಸಮಾನ ಪ್ರಾತಿನಿಧ್ಯ ಕಲ್ಪಿಸಬೇಕು. ನಾಮ ನಿರ್ದೇಶಿತ ವಿಧಾನ ಪರಿಷತ್ ಸದಸ್ಯ ೯ ಸ್ಥಾನದಲ್ಲಿ ಅಹಿಂದ ಸಮುದಾಯಗಳಿಗೆ ೪ ಸ್ಥಾನವನ್ನು ಕೊಡಲೇಬೇಕು. ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳಲ್ಲಿ ಶೇ.೫೦ರಷ್ಟು ಸ್ಥಾನಗಳನ್ನು ಅಹಿಂದ ಸಮುದಾಯಗಳಿಗೆ ಮೀಸಲಿಡಬೇಕು.
ಜಾತಿ ಗಣತಿ ವರದಿಯ ಶಿಫಾರಸುಗಳನ್ನು ಜಾರಿಗೆ ತಂದು ಅಹಿಂದ ಸಮುದಾಯಗಳಿಗೆ ರಾಜಕೀಯ ನ್ಯಾಯ ಒದಗಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಅನಾಹುತ ಉಂಟಾಗಲಿದೆ ಎಂದು ಸಭೆ ಎಚ್ಚರಿಕೆ ನೀಡಿತು.



