ಸುನೀಲ್ ಸ್ವಾಮಿರಾಜು ನಿರ್ದೇಶನದ ’ದಕ್ಷ’ ಕೌಟುಂಬಿಕ ಕನ್ನಡ ಚಲನಚಿತ್ರಕ್ಕೆ ಮೈಸೂರಿನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮುಹೋರ್ತ : ಪೋಸ್ಟರ್ ಬಿಡುಗಡೆ

 

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಕಲ್ಪವೃಕ್ಷ ಕ್ಷೇತ್ರ ಎಂದೇ ಪ್ರಖ್ಯಾತಿ ಹೊಂದಿರುವ ವರುಣ ಹೋಬಳಿಯ ನಿರ್ಮಾಣ್ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ದಕ್ಷ ಕನ್ನಡ ಚಲನಚಿತ್ರದ ಮೂಹೂರ್ತ ಮತ್ತು ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು.

ಕೆರೆಹಳ್ಳಿ ವೆಂಕಟೇಶ್ ನಿರ್ಮಾಪಕರಾಗಿದ್ದು, ಸೀತಾಲಕ್ಷ್ಮಿ ಲಯನ್ ದೇವರಾಜ್ ಸಹ ನಿರ್ಮಾಪಕರಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಸುನೀಲ್ ಸ್ವಾಮಿರಾಜು ನಿರ್ದೇಶಿಸುತ್ತಿದ್ದಾರೆ.

ದಕ್ಷ ಚಿತ್ರದ ಕತೆ ಕುರಿತು ನಿರ್ದೇಶಕ ಸುನೀಲ್ ಸ್ವಾಮಿರಾಜು ಮಾತನಾಡಿ, ಈ ಚಿತ್ರದಲ್ಲಿ ನಾವು ತಂದೆ ಮತ್ತು ಮಗಳ ನಡುವಿನ ಸಂಬಂಧ ಕುರಿತು ಅತ್ಯಂತ ನವಿರಾಗಿ ಕತೆಯನ್ನು ಹೇಳುವವರಿದ್ದೇವೆ.

ಜತೆಗೆ ಒಂದು ಕುಟುಂಬದ ಅಭಿವೃದ್ಧಿ, ಮಕ್ಕಳ ಶ್ರೇಯಸ್ಸು, ಸಂತೋಷದಲ್ಲಿ ತಂದೆಯ ಪಾತ್ರ ಎಂತಹದು ಎಂದು ಈ ಚಿತ್ರದಲ್ಲಿ ನವಿರಾಗಿ ಹೇಳಲಾಗಿದೆ. ಇದುವರೆಗೂ ಅನೇಕ ಕನ್ನಡ ಚಿತ್ರಗಳಲ್ಲಿ ತಾಯಿಯ ಪಾತ್ರಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ನಾವು ತಂದೆಯ ಪಾತ್ರ ಕುರಿತು ಕತೆಯನ್ನು ರಚಿಸಿದ್ದೇವೆ. ಚಿತ್ರದಲ್ಲಿ ಸೆಂಟಿಮೆಂಟ್‌ಗೆ ಮಹತ್ವ ನೀಡಲಾಗಿದೆ. ನಾನು ಈಗಾಗಲೇ ೬ ಚಿತ್ರಗಳನ್ನು ನಿರ್ದೇಶಿದ್ದೇನೆ. ಚಿತ್ರದಲ್ಲಿ ಹಾಡುಗಳು, ಫೈಟಿಂಗ್ ಎಲ್ಲವೂ ಇರುವ ಕಾರಣ ಈ ಚಿತ್ರ ಕಮರ್ಷಿಯಲ್ ಚಿತ್ರ ಆಗಿದೆ. ಇಂದು ಮುಹೋರ್ತ ಆಗಿದೆ. ಒಂದು ತಿಂಗಳ ಶೆಡ್ಯೂಲ್‌ನಲ್ಲಿ ಟಾಕಿ ಪೋಷನ್ ಮುಗಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ದಕ್ಷ ಒಂದು ಸಂಪೂರ್ಣ ಕೌಟುಂಬಿಕ ಚಿತ್ರವಾಗಿದೆ, ಇದರಲ್ಲಿ ಪ್ರೇಮ, ಪ್ರೀತಿ, ಹಾಡುಗಳು, ಸಾಹಸ ಎಲ್ಲವೂ ಇದೆ. ತಂದೆ ಪಾತ್ರವೇ ಈ ಚಿತ್ರದ ಜೀವಾಳವಾಗಿದೆ. ಖಂಡಿತಾ ಈ ಚಿತ್ರವನ್ನು ಕನ್ನಡಿಗರು ನೋಡಿ ನಮ್ಮನ್ನು ಹರಸುತ್ತಾರೆ ಎಂಬ ನಂಬಿಕೆ ಇದೆ ಎಂದರು.