ಪಾಂಡವಪುರ : ತಾಲ್ಲೂಕಿನ ಚಿನಕುರಳಿ ಹೋಬಳಿ ದೊಡ್ಡೇಗೌಡನಕೊಪ್ಪಲಿನಿಂದ ಸಣಬದ ಕೊಪ್ಪಲು ಮಾರ್ಗವಾಗಿ ಕಡಬ ಗ್ರಾಮದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾನುವಾರ ಸಣಬದಕೊಪ್ಪಲು ಗ್ರಾಮದಲ್ಲಿ ಭೂಮಿಪೂಜೆ ಸಲ್ಲಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸುಮಾರು 20 ವರ್ಷಗಳಿಂದ ತೀರಾ ಹದಗೆಟ್ಟಿದ್ದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದ ಹಿನ್ನಲೆ ಸುಮಾರು 6.18 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ರಸ್ತೆಯ ಗುಣಮಟ್ಟವನ್ನು ಗ್ರಾಮಸ್ಥರು ಪರಿಶೀಲಿಸಿ ಕಾಮಗಾರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಸಾವಯವ ಕೃಷಿಗೆ ಆದ್ಯತೆ ನೀಡಿ
ಸರ್ಕಾರ ರಾಜ್ಯದಲ್ಲಿ ಎರಡು ತಾಲ್ಲೂಕುಗಳನ್ನು ಸಾವಯವ ಕೃಷಿ ತಾಲ್ಲೂಕು ಎಂದು ಘೋಷಿಸಿದೆ, ಅದರಲ್ಲಿ ಪಾಂಡವಪುರ ತಾಲ್ಲೂಕು ಸಹ ಒಂದಾಗಿದ್ದು, ರೈತರು ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಕಡಿಮೆ ಮಾಡಿ ಆರೋಗ್ಯಕರ ಆಹಾರ ಬೆಳೆಯಬೇಕು. ಈ ಬಗ್ಗೆ ಕೃಷಿ ಅಧಿಕಾರಿಗಳು ನಿಮಗೆ ಅಗತ್ಯವಾದ ಸಲಹೆ ನೀಡುತ್ತಾರೆ ಎಂದು ಹೇಳಿದರು.
ತೊಣ್ಣೂರು ಕೆರೆಯಿಂದ ಕೃಷಿಗೆ ನೀರು
ಗ್ರಾಮದ ಸುತ್ತಮುತ್ತಲು ಸಣ್ಣ ಹಿಡುವಳಿದಾರ ರೈತರು ಮಾತ್ರ ಇದ್ದು, ತರಕಾರಿ ಬೆಳೆದೆ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಹಸೀಲ್ದಾರರು ತೊಣ್ಣೂರು ಕೆರೆಯಿಂದ ಪಂಪ್‌ಸೆಟ್ ಮೂಲಕ ನೀರು ಹಾಯಿಸಲು ಅವಕಾಶ ನೀಡುತ್ತಿಲ್ಲ ಎಂದು ಯುವ ರೈತ ಮುಖಂಡರು ಶಾಸಕರಿಗೆ ದೂರು ನೀಡಿದ ಹಿನ್ನಲೆ ಶಾಸಕರು ಪ್ರತಿಕ್ರಿಯಿಸಿ, ಸಣ್ಣ ಹಿಡುವಳಿದಾರ ರೈತರಿಗೆ ತಾವುದೇ ತೊಂದರೆ ಕೊಡಬೇಡಿ, ಕೆರೆಯಿಂದ ಕೃಷಿಗೆ ನೀರು ಹಾಯಿಸಲು ಅವಕಾಶ ನೀಡಿ ಎಂದು ತಹಸಿಲ್ದಾರ್ ಅವರಿಗೆ ಸೂಚನೆ ನೀಡಿರುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಡಿ
ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಗ್ರಾಮದಲ್ಲಿ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ರೈತರು, ಯುವಕರು ಕುಡಿದು ಹಾಳಾಗುತ್ತಿದ್ದಾರೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಜೂಜು ನಡೆಯುತ್ತಿದೆ. ಇದನ್ನು ತಪ್ಪಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದಾಗ, ಶಾಸಕರು ಗ್ರಾಮಗಳಲ್ಲಿ ಮುಖಂಡರು, ಯುವಕರು, ಮಹಿಳೆಯರು ಸಂಘಟಿತರಾಗಿ ಎಲ್ಲೆಲ್ಲಿ ಮದ್ಯ ಮಾರಾಟ ನಡೆಯುತ್ತಿದೆಯೋ ಅಲ್ಲಿಗೆ ಹೋಗಿ ಮದ್ಯ ಮಾರಾಟ ಮಾಡದಂತೆ ಒತ್ತಾಯ ಮಾಡಬೇಕು, ಯುವಕರು, ಮಹಿಳೆಯರು ಒಗ್ಗಟ್ಟಾದರೆ ಮಾತ್ರ ಇದನ್ನು ತಡೆಯಬಹುದು ಎಂದು ಸಲಹೆ ನೀಡಿದರು.
ರೈತಸಂಘ ಸೇರ್ಪಡೆಯಾದ ಹತ್ತಾರು ಯುವಕರು
ಕಾರ್ಯಕ್ರಮದಲ್ಲಿ ಯುವ ವಕೀಲರಾದ ಪ್ರೀತಮ್ ನೇತೃತ್ವದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಮ್ಮುಖದಲ್ಲಿ ಹೇಮಂತ್, ಮನೋಹರ, ಸಚಿನ್, ಮನೋಜ್, ಸತೀಶ್, ಕಾರ್ತಿಕ್, ತೇಜಸ್, ಕೃಷ್ಣ, ಲೋಕೇಶ, ಚಂದನ್, ಅಭಿ ಸೇರಿದಂತೆ ಹಲವು ಯುವಕರು ರೈತಸಂಘಕ್ಕೆ ಸೇರ್ಪಡೆಯಾದರು.
ಗ್ರಾಮಗಳಲ್ಲಿ ಯುವಕರು ಒಗ್ಗಟ್ಟಾಗಬೇಕು
ರೈತಸಂಘಕ್ಕೆ ಸೇರ್ಪಡೆಯಾದ ಯುವಕರನ್ನು ಉದ್ದೇಶಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಯುವಕರ ಕೈಯಲ್ಲಿದೆ, ಯುವಕರು ಒಗ್ಗಟ್ಟಾಗಿ ಕೃಷಿಗೆ ಆದ್ಯತೆ ನೀಡುವ ಮೂಲಕ ತಮ್ಮ ಆರ್ಥಿಕತೆ ಸುಧಾರಿಸಿಕೊಳ್ಳಬೇಕು. ಜತೆಗೆ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟಕ್ಕೆ ಯುವಕರೇ ತಡೆ ಒಡ್ಡಬೇಕು ಎಂದು ಸಲಹೆ ನೀಡಿದರು.
ಶುದ್ಧ ಕುಡಿಯುವ ನೀರು ಘಟಕ ಭರವಸೆ
ಸಣಬದ ಕೊಪ್ಪಲು ಕುಗ್ರಾಮವಾಗಿದ್ದು, ಗ್ರಾಮದಲ್ಲಿ ಶುದ್ಧವಾದ ಕುಡಿಯುವ ನೀರು ದೊರಕುತ್ತಿಲ್ಲ, ಈ ಬಗ್ಗೆ ಶಾಸಕರು ಶೀಘ್ರಕ್ರಮ ವಹಿಸಬೇಕು ಎಂದು ಯುವಕರು ಶಾಸಕರಲ್ಲಿ ಮನವಿ ಮಾಡಿದ ಹಿನ್ನಲೆ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕ ಒದಗಿಸುವು ಭರವಸೆ ನೀಡಿದರು.
ಮುಖಂಡರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸಣಬದಕೊಪ್ಪಲು ಗ್ರಾಮದ ಯುವಕರು ಬೃಹತ್ ಹೂವಿನ ಹಾರ ಹಾಕುವ ಮೂಲಕ ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ರೈತಮುಖಂಡರಾದ ಕೆ.ಟಿ.ಗೋವಿಂದೇಗೌಡ, ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ವೈ.ಪಿ.ಮಂಜುನಾಥ್, ಮಹಿಳಾ ಅಧ್ಯಕ್ಷೆ ರೂಪ, ಸಣಬದ ಕೊಪ್ಪಲು ಗ್ರಾಮದ ಮುಖಂಡರಾದ ವಕೀಲರಾದ ಶ್ರೀಧರ, ಚಲುವೇಗೌಡ, ಜಯರಾಮು, ಬೋರೇಗೌಡ, ಶಿವರಾಮು, ಡೈರಿ ಕುಮಾರ, ಬೆಟ್ಟೇಗೌಡ, ಅಭಿಷೇಕ್, ಪ್ರಕಾಶ ಮತ್ತಿತರರು ಇದ್ದರು.





