ಜೆಪಿ ನಗರ ಸಮೀಪದ ಮಹದೇವಪುರ ಬಡಾವಣೆಯ ನೂರಾರು ಮಹಿಳೆಯರು ಸಮಾಜ ಸೇವಕಿ ನಾಗರತ್ನಮ್ಮ ನಾಗರಾಜು ನೇತೃತ್ವದಲ್ಲಿ ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೀಪ ಬೆಳಗಿಸಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಾಧನೆ ಮಾಡಲು ಅನೇಕ ತೊಡಕುಗಳು ಇದ್ದರೂ ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಕೌಟುಂಬಿಕ ನಿರ್ವಹಣೆಯ ಜತೆ ಹೊರಗಡೆ ದುಡಿಮೆ ಮಡಿ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿರುವುದನ್ನು ಕಾಣಬಹುದು. ಇದನ್ನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ ೨ ಸಾವಿರ ಹಣ ನೀಡಿ ಮಹಿಳೆಯರ ಆರ್ಥಿಕ ಸುಧಾರಣೆ ಮಾಡಿದ್ದಾರೆ. ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆ ಮೂಲಕ ಹಸಿವು ನಿವಾರಣೆ, ಉಚಿತ ವಿದ್ಯುತ್ ಮತ್ತು ನಿರುದ್ಯೋಗಿ ಯುವಕರಿಗೆ ಸಹಾಯ ಧನ ನೀಡುವ ಮೂಲಕ ಬಡ ಕುಟುಂಬಕ್ಕೆ ನೆರವಾಗಿದ್ದಾರೆ. ಮಹಿಳೆಯರು ಕೆಲಸಕ್ಕೆ ಬಾರದ ದಾರಾವಾಹಿಗಳನ್ನು ನೋಡಿ ತಮ್ಮ ಸಮಯ ವ್ಯರ್ಥ ಮಾಡಿಕೊಳ್ಳುವುದರ ಜತೆಗೆ ಮೌಢಕ್ಕೆ ಜಾರುತ್ತಿದ್ದಾರೆ. ಟಿವಿ ಮತ್ತು ಮೊಬೈಲ್‌ಗಳಲ್ಲಿ ವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಳ್ಳಬೇಕು, ದಾರ್ಶನಿಕರ ಸಾಧನೆಗಳನ್ನು ಓದಬೇಕು. ಇದರಿಂದ ಜ್ಞಾನವೂ ವೃದ್ಧಿಯಾಗಿ ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದರು.
ಇದೇ ವೇಳೆ ವಿವಿಧ ಸಾಧಕ ಮಹಿಳೆಯರನ್ನು ಗೌರವಿಸಲಾಯಿತು. ಜಿಪಂ ಮಾಜಿ ಸದಸ್ಯರಾದ ಜವರಪ್ಪ, ಗ್ರಾಪಂ ಮಾಜಿ ಅಧ್ಯಕ್ಷರಾದ ಬುಲ್ಲೇಟ್ ಮಹದೇವು, ಗ್ರಾಪಂ ಮಾಜಿ ಸದಸ್ಯರಾದ ಮಹದೇವು, ಲಕ್ಷ್ಮಣ್ ಪ್ರಭು, ಕಮಲಾ ನಟರಾಜ್, ಭಾರತ್ ಭೀಮ್ ಸೇನೆ ಅಧ್ಯಕ್ಷೆ ಮಹದೇವಮ್ಮ, ರೈಲ್ವೆ ಕೋ ಆಪರೇಟೀವ್ ಬ್ಯಾಂಕ್ ನಿರ್ದೇಶಕರಾದ ಡಾ.ಕಾವೇರಿ ಪ್ರಕಾಶ್, ವಕೀಲರಾದ ಮಂಜುಳ,ಮೈಸೂರು ಜಿಲ್ಲಾ ಜನಪದ ಸಾಹಿತ್ಯ ಸಂಸ್ಥೆ ಅಧ್ಯಕ್ಷರಾದ ಕ್ಯಾತನಹಳ್ಳಿ ಪ್ರಕಾಶ್, ಪೊಲೀಸ್ ಕಾನ್ಸ್‌ಟೇಬಲ್ ಜಿ.ಸರಸ್ವತಿ, ಅನಂತಲಕ್ಷ್ಮಿ, ಸುನಂದ, ಮೈತ್ರಿ ನಟರಾಜ್, ಇಂದ್ರ ಸೋಮಣ್ಣ, ರಾಧಾ ಶಿವರಾಜೇಗೌಡ, ನೀತು ಚಂದ್ರಶೇಖರ್ ಮುಂತಾದವರು ಇದ್ದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಭಾಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಎಲೆಮರೆ ಕಾಯಿಯಂತಿರುವ ಸಾಧಕ ಮಹಿಳೆಯರನ್ನು ನಮ್ಮ ಬಡಾವಣೆಯ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಗೌರವಿಸಲಾಗಿದೆ. ಮುಂದಿನ ವರ್ಷ ಇನ್ನೂ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗುವುದು.
ನಾಗರತ್ನಮ್ಮ ನಾಗರಾಜು, ಮಹಿಳಾ ಮುಖಂಡರು





