ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ಅರಿವು ಇದ್ದಾಗ ಮಾತ್ರ ಅವಕಾಶ ಪಡೆಯಲು ಸಾಧ್ಯ ಎಂದು ಹೇಳಿದ ಡಾ. ನಾಗಲಕ್ಷ್ಮೀ ಚೌಧರಿ


 ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು: ಅರಿವು ಎಂಬುವುದು ಬದುಕು, ಅಜ್ಞಾನ ಎಂಬುವುದು ಸಾವು. ಅರಿವು ಇದ್ದಾಗ ಮಾತ್ರ ನಿಮ್ಮ ಹಕ್ಕು, ಅವಕಾಶ, ಅಧಿಕಾರ ತಿಳಿಯಲಿದೆ. ಆದ್ದರಿಂದ ಮಹಿಳೆಯರು ಅರಿವನ್ನು ಹೊಂದಿ ಸಶಕ್ತಳಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಕರೆ ನೀಡಿದರು.

ನಗರದ ಟೌನ್‌ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ಹಕ್ಕು ಅಧಿಕಾರವನ್ನು ಕೊಡದೆ ಹೋಗಿದ್ದರೆ ಇಂದು ನಾನೂ ಸಹ ಈ ವೇದಿಕೆಯಲ್ಲಿ ನಿಂತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ನುಡಿದರು.

ನಮ್ಮ ಮಹಿಳೆಯರಿಗೆ ಇಂದಿಗೂ ಸಹ ಅವರವರ ಹಕ್ಕುಗಳ ಬಗ್ಗೆ ಅರಿವಿಲ್ಲ. ತಮ್ಮ ಏಳಿಗೆಗೆ ಸರಕಾರ ನೀಡುತ್ತಿರುವ ಯೋಜನೆಗಳೇನು? ಎಂಬ ಪೂರ್ಣ ಜ್ಞಾನವಿಲ್ಲ. ತಮ್ಮ ಮೇಲಾಗುವ ದಾಳಿಗಳಿಗೆ ನ್ಯಾಯ ಪಡೆದುಕೊಳ್ಳುವ ಮಾರ್ಗವೂ ಗೊತ್ತಿಲ್ಲ. ನಮ್ಮ ಹೆಣ್ಣು ಮಕ್ಕಳು ಪತ್ರಿಕೆಗಳನ್ನು ಓದುವುದಿಲ್ಲ. ಮೊಬೈಲ್ ನೋಡಿದ್ರೂ, ಏನನ್ನು ನೋಡಬೇಕೋ ಅದನ್ನು ನೋಡುವುದಿಲ್ಲ ಎಂದು ವಿಷಾಧಿಸಿದರು.

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಪ್ರಕೃತಿಯ ಸೃಷ್ಟಿಯಲ್ಲಿ ಸ್ತ್ರೀ-ಪುರುಷ ಇಬ್ಬರೂ ಸಮಾನರು. ಪ್ರಕೃತಿಯೇ ಈ ಎರಡು ಸೃಷ್ಟಿಗೆ ಸಮಾನತೆ ನೀಡಿರುವಾಗ ಸಮಾಜದಲ್ಲಿ ತಾರತಮ್ಯ ಒಳ್ಳೆಯದಲ್ಲ. ಇಂದು ಒಂದು ದೇಶ ಮತ್ತು ಸಮಾಜ ಏಳಿಗೆ ಆಗಬೇಕಾದಲ್ಲಿ ಮಹಿಳೆಯ ಪಾತ್ರ ದೊಡ್ಡದು ಎಂದು ತಿಳಿಸಿದರು.

ಸಮಾಜದಲ್ಲಿ ಹಲವಾರು ವಿಷಯದಲ್ಲಿ ಹೆಣ್ಣನ್ನು ದಮನ ಮಾಡುವ ಕೆಲಸಗಳು ನಡೆಯುತ್ತದೆ. ರಾಜಕೀಯವಾಗಿ ಅಧಿಕಾರ ಪಡೆಯುವ ಸಂದರ್ಭದಲ್ಲಿ ಗಂಡು ಹೆಣ್ಣಿನ ಜಿದ್ದಾಟದಲ್ಲಿ   ಮಹಿಳೆಯರಿಗೆ ಅದು ಸಾಧ್ಯವಾಗುವುದಿಲ್ಲ. ಮಹಿಳೆಯರು, ಮಕ್ಕಳು ಮತ್ತು  ಮನೆಯನ್ನು ಪೋಷಣೆ ಮಾಡುತ್ತಾರೆ. ಅವರನ್ನು ಕುಟುಂಬಕ್ಕೆ ಸೀಮಿತ ಮಾಡಿ ಕೆಲವು ಪುರುಷರು ಈ ರೀತಿ ಕಟ್ಟುಪಾಡು ಮಾಡಿದ್ದಾರೆ. ಅದಕ್ಕೆ ಧರ್ಮದ ತಳುಕು ಹಾಕಿದ್ದಾರೆ ಎಂದು ತಿಳಿಸಿದರು.

ಮಹಿಳೆ ಆಗುವುದಕ್ಕೂ  ಮುನ್ನ ಅವರೂ ಮನುಷ್ಯೆ ಎಂಬದನ್ನು ಅರಿತುಕೊಳ್ಳಬೇಕು. ಸಮಾಜಕ್ಕೆ ಏನಾದರೂ  ನೀಡಬೇಕು ಎಂಬ ಹಂಬಲಗಳಿವೆ. ಈ ನಿಟ್ಟಿನಲ್ಲಿ ಮಹಿಳೆಯರ ಆಕಾಂಕ್ಷಿಗಳನ್ನು ಹತ್ತಿಕ್ಕಿವ ಕೆಲಸ ಮಾಡಬಾರದು ಎಂದರು.

ಇದೇ ಸಂದರ್ಭದಲ್ಲಿ ದೇಶ ರಕ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ತಾಯಂದಿರು ಮತ್ತು ಪತ್ನಿಯರನ್ನು ಸನ್ಮಾನಿಸಲಾಯಿತು. ಜತೆಗೆ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕ ಮಹಿಳೆಯರು ಮತ್ತು ಆಟೋ ಚಾಲಕಿಯರನ್ನೂ ಸಹ ಗೌರವಿಸಿ, ಉಡುಗೋರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ವಿ.ಪಿ.ಸುಶೀಲ ಅವರು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಸಮಿತಿಯ ರಾಜ್ಯಾಧ್ಯಕ್ಷೆ ವಿ.ಪಿ.ಸುಶೀಲ, ರಾಜೇಶ್, ಎಂ.ಪುಟ್ಟರಾಜು, ಅಮೀನ ಬೇಗಂ, ವೈ.ಬಿ.ಈಶ್ವರ್, ಪರಮೇಶ್, ಎನ್.ಕೆ.ಸುದರ್ಶನ್, ಹೆಚ್.ಟಿ.ಪಾರ್ವತಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಯೋಧರ ತಾಯಂದಿರು ಮತ್ತು ಪತ್ನಿಯರನ್ನು ಗೌರವಿಸಿ, ಆಟೋ ಚಾಲಕಿಯರು, ಆಶಾ ಕಾರ್ಯಕರ್ತೆರನ್ನು ಸನ್ಮಾನಿಸಿ ಉಡುಗೋರೆ ನೀಡಿದ್ದೇವೆ. ಇದೊಂದು ಸಾರ್ಥಕ ಕಾರ್ಯಕ್ರಮ, ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರದಿಂದ ಮಹಿಳೆಯರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಈ ಸೌಲಭ್ಯ ಕೊಡಿಸುವಲ್ಲಿ ನಮ್ಮ ಸಂಘಟನೆ ಕಾರ್ಯೋನ್ಮುಖವಾಗುತ್ತದೆ.

ವಿ.ಪಿ.ಸುಶೀಲ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ