ಮೈಸೂರು ತಾಲ್ಲೂಕು ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ : ಆರೋಪ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ : ಅಪರ ಜಿಲ್ಲಾಧಿಕಾರಿಗಳಿಗೆ ಮನವಿ


 ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಸಾರ್ವಜನಿಕರ ಕೆಲಸ ಮಾಡಲು ವಿಳಂಬ ಧೋರಣೆ ಅನುಸರಿಸುವ ಮೂಲಕ ಮೈಸೂರು ತಾಲ್ಲೂಕು ಕಚೇರಿ ಅಧಿಕಾರಿಗಳು ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ 

ಗುರುವಾರ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಚಾ.ಗು. ನಾಗರಾಜ್ ಮತ್ತು ಜಿಲ್ಲಾಧ್ಯಕ್ಷರಾದ ಸಂತೋಷ್, ರೈತಸಂಘಟನೆ, ಮೈಸೂರು ಹೃದಯವಂತ ಕನ್ನಡಿಗರ ಬಳಗದ ನೇತೃತ್ವದಲ್ಲಿ ಬೆಳಗ್ಗೆ ಸುಮಾರು ೧೧ ಗಂಟೆಗೆ ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ತಾಲ್ಲೂಕು ತಹಸೀಲ್ದಾರ್ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಾ.ಗು.ನಾಗರಾಜ್ ಮಾತನಾಡಿ, ಮೈಸೂರು ತಾಲೂಕು ಕಚೇರಿಯಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸಗಳು ಸುಲಲಿತವಾಗಿ ಆಗುವುದಿಲ್ಲ, ಮಧ್ಯವರ್ತಿಗಳ ಮೂಲಕ ಇಂತಹ ಕೆಲಸಕ್ಕೆ ಇಂತಿಷ್ಟು ಹಣ ಎಂದು ಕೊಟ್ಟ ಮೇಲೆ ಮಾತ್ರ ಇಲ್ಲಿ ಕೆಲಸಗಳು ಆಗುತ್ತವೆ. ಲಂಚ ಕೊಡಲು ಆಗದ ಸಾರ್ವಜನಿಕರ ಅರ್ಜಿಗಳು ವರ್ಷಗಟ್ಟಲೆ ಕಚೇರಿಯಲ್ಲಿ ಕೊಳೆಯುತ್ತವೆ, ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅನೇಕ ಕಾರಣಗಳನ್ನು ಹೇಳಿ ಸಾರ್ವಜನಿಕರನ್ನು ಸಾಗ ಹಾಕುತ್ತಾರೆ. ಹಣ ಕೊಟ್ಟರೆ ಕ್ಷಣಾರ್ಧದಲ್ಲಿ ನಮ್ಮ ಕೆಲಸಗಳು ಆಗುತ್ತವೆ. ಇದರ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಇದೇ ವೇಳೆ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಪಟ್ಟು ಹಿಡಿದರು, ಆದರೇ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಎಂದು ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದ ಕಾರಣ ಪ್ರತಿಭಟನಾಕಾರರು, ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಅರ್ಜಿ ಸ್ವೀಕರಿಸಿ ಪರಿಶೀಲನೆ ನಡೆಸಿ ಕ್ರಮ ಜರುಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌತಮ್ ವಿಶ್ವಕರ್ಮ, ಖಜಾಂಚಿ ಅನುರಾಜ್ ಗೌಡ, ಗೌರವಾಧ್ಯಕ್ಷರಾದ ಮನುಗೌಡ, ಹೃದಯವಂತ ಕನ್ನಡಿಗರ ಬಳಗದ ಡಿಪಿಕೆ ಪರಮೇಶ್, ರೈತ ಮುಖಂಡರಾದ ಸಿದ್ಧರಾಮ್, ಸಿಂಧುವಳ್ಳಿ, ಶಿವಕುಮಾರ್, ದೇವರಾಜ್, ಕೀರ್ತಿ ಕುಮಾರ್, ಬೆಲ್ಲವತ್ತ ರಾಮಚಂದ್ರಪ್ಪ, ಚಿಯೋನ್ ಪಾಲ್, ಸಿದ್ದೇಗೌಡ, ಸುನಿಲ್ ಕುಮಾರ್, ಮಂಜುನಾಥ್, ನಿತೀಶ್, ಗಿರೀಶ್ ಆರ್., ಮಧುಸೂದನ್, ರಾಜು ಪಿ, ಶ್ರೀನಿವಾಸ್, ಸಂಜಯ್, ಅರ್ಜುನ್, ಹೇಮಂತ್ ಮತ್ತಿತರರು ಇದ್ದರು.

ಮೈಸೂರು ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಕಡತಗಳನ್ನು ಉದ್ದೇಶಪೂರ್ವಕವಾಗಿ ಕಚೇರಿಯಲ್ಲಿಟ್ಟುಕೊಂಡು ವಿಳಂಬ ನೀತಿ ಅನುಸರಿಸುತ್ತಾರೆ. ಕಂದಾಯ ಇಲಾಖೆಯ ಸುತ್ತೋಲೆಯನ್ನು ಅರ್ಥೈಸಿಕೊಳ್ಳದೆ ಪೌತಿ ಖಾತೆ ಹಾಗೂ

ದುರಸ್ತಿಪೋಡ್ ಮಾಡುತ್ತಿಲ್ಲ, ಸರ್ಕಾರದ ಸುತ್ತೋಲೆಗಳು, ಕಾನೂನು ಕಟ್ಟಳೆಗಳು ಇಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ. ಮೈಸೂರು ತಾಲ್ಲೂಕು  ಆಡಳಿತದಿಂದ ನಾಗರಿಕರಿಗೆ ಹಾಗೂ ರೈತರಿಗೆ ದಿನನಿತ್ಯ ಕಿರುಕುಳವಾಗುತ್ತಿದ್ದು ಕಚೇರಿಯಲ್ಲಿ ಬೇಜವಾಬ್ದಾರಿ

ಉತ್ತರಗಳನ್ನು ನೀಡುವುದಲ್ಲದೆ ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಉನ್ನತ ಅಧಿಕಾರಿಗಳು, ಸಚಿವರು ಕೂಡಲೇ ಇತ್ತ ಗಮನಹರಿಸಬೇಕು.

ಸಂತೋಷ್ ಕುಮಾರ್, ಮೈಸೂರು ಜಿಲ್ಲಾ ಅಧ್ಯಕ್ಷರು.