ಮೈಸೂರು : ಕ್ರಿಕೆಟ್ ಟೂರ್ನಮೆಂಟ್ ಮೂಲಕ ಯುವಕರನ್ನು ಸಂಘಟಿಸಿ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸಿದ ಯುವ ಕಾಂಗ್ರೆಸ್‍ನ ಅಭಿಯಾನ ಶ್ಲಾಘನೀಯ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಹೇಳಿದರು.
ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಶಮ್ಸ್ ಫಂಕ್ಷನ್ ಹಾಲ್‍ನಲ್ಲಿ ಏರ್ಪಡಿಸಿದ್ದ ತನ್ವೀರ್ ಸೇಠ್ ಕಪ್ ಕ್ರಿಕೆಟ್ ಟೂರ್ನಮೆಂಟ್ ಸಮಾರೋಪ ಸಮಾರಂಭದಲ್ಲಿ ಮೈಸೂರಿನ ಎಕ್ಸಲೆಂಟ್ ವಾರಿಯರ್ಸ್ ತಂಡಕ್ಕೆ ತನ್ವೀರ್ ಸೇಠ್ ಕಪ್ ವಿತರಿಸಿ ಮಾತನಾಡಿದರು.
ಜನವರಿ 3 ರಂದು ರಾಜೀವ್‍ನಗರದ ಈದ್ಗಾ ಮೈದಾನದಲ್ಲಿ ಶಾಸಕ ತನ್ವೀರ್ ಸೇಠ್ ಅವರು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಯುವ ಕಾಂಗ್ರೆಸ್ ಆಯೋಜಿಸಿದ್ದ ತನ್ವೀರ್ ಸೇಠ್ ಕಪ್ ಕ್ರಿಕೆಟ್ ಟೂರ್ನಮೆಂಟ್‍ಗೆ ಚಾಲನೆ ನೀಡಿದ್ದರು. ಇದೀಗ ಈ ಟೂರ್ನಮೆಂಟ್ ಅಭೂತಪೂರ್ವ ಯಶಸ್ಸಿನೊಂದಿಗೆ ಮುಕ್ತಾಯವಾಗಿ ಯುವ ಜನಾಂಗಕ್ಕೆ ಒಂದು ಉತ್ತಮ ಸಂದೇಶ ನೀಡಿದೆ. ಯುವಕರು ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಬಹುದು ಎನ್ನಲು ಈ ಕ್ರೀಡಾಕೂಟವೇ ಸಾಕ್ಷಿ, ಈ ಯಶಸ್ಸು ರಾಜ್ಯ ಯುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಅಬ್ರಾರ್ ಮೊಹಮ್ಮದ್ ಅವರಿಗೆ ಸಲ್ಲುತ್ತದೆ ಎಂದರು.
ಮೈಸೂರಿನಲ್ಲಿ ಡ್ರಗ್ಸ್ ತಯಾರು ಮಾಡುವ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅದು ಇಲ್ಲಿ ತಯಾರಾಗಿ ಮುಂಬೈನಲ್ಲಿ ಮಾರಾಟವಾಗುತ್ತಿತ್ತು ಎನ್ನಲಾಗಿದೆ. ನಮ್ಮ ಯುವಕರನ್ನು ಡ್ರಗ್ಸ್ ಮುಕ್ತರನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಯುವ ಜನಾಂಗವನ್ನು ಶಿಕ್ಷಣದತ್ತ ಮುಖ ಮಾಡಲು ಪ್ರೇರೇಪಿಸಬೇಕು, ಶಿಕ್ಷಣ ಕಡಿಮೆ ಇರುವ ಕಡೆ, ವ್ಯಸನಿಗಳು ಹೆಚ್ಚಾಗುತ್ತಾರೆ ಎಂದು ಮಂಜುನಾಥ್ ಎಚ್ಚರಿಸಿದರು.
ಪ್ರಸ್ತುತ ದಿನದಲ್ಲಿ ಯುವಕರು ಹೆಚ್ಚಾಗಿ ರಾಜಕೀಯಕ್ಕೆ ಬರಬೇಕು, ಪ್ರಶ್ನಿಸುವ ಮನೋಭಾವ ಇಟ್ಟುಕೊಳ್ಳಬೇಕು. ಇದರಿಂದ ನಾಯಕತ್ವ ಗುಣಗಳು ಬರುತ್ತವೆ. ದೇಶದ ರಾಜಕೀಯ ಬೆಳವಣಿಗಳ ಬಗ್ಗೆ ಜಾಗೃತರಾಗಬೇಕು ಎಂದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ನಿಗಮ್ ಭಂಡಾರಿ ಮಾತನಾಡಿ, ಕ್ರೀಡೆ ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿಡುವುದರ ಜತೆ ನಮಗೆ ಪ್ರಾಮಾಣಿಕತೆ, ವಿನಯತೆ, ಧೈರ್ಯ ಮತ್ತು ಪ್ರೀತಿಯನ್ನು ಕಲಿಸುತ್ತದೆ. ನಮ್ಮನ್ನು ಮಾನಸಿಕವಾಗಿ ಸದೃಢವಾಗಿಸುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಾಗಲಿ ಎಂದು ಅಶಿಸಿದರು.
ಮೈಸೂರು ಮಹಾನಗರ ಪಾಲಿಕೆ ಮಾಜಿ ವಿರೋಧಪಕ್ಷದ ನಾಯಕರಾದ ಕೆ.ಸಿ.ಶೌಕತ್‍ಪಾಷ ಅವರು ಮಾತನಾಡಿ, ಶಾಸಕರಾದ ತನ್ವೀರ್ ಸೇಠ್ ಮಾರ್ಗದರ್ಶನದಲ್ಲಿ ಯುವ ಕಾಂಗ್ರೆಸ್ ಏರ್ಪಡಿಸಿದ್ದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ತನ್ವೀರ್ ಸೇಠ್ ಕಪ್ ಕ್ರಿಕೆಟ್ ಟೂರ್ನಮೆಂಟ್ ಯಶಸ್ಸು ಕಂಡಿದೆ. ಮಾದಕ ವಸ್ತುಗಳ ಮಾರಾಟ, ಸೇವನೆ, ತಯಾರಿಕೆ ತಡೆಗಟ್ಟುವುದು ಕೇವಲ ಪೊಲೀಸರ ಜವಾಬ್ದಾರಿಯಲ್ಲ ನಾಗರಿಕರ ಮೇಲೂ ಈ ಜವಾಬ್ದಾರಿ ಇದೆ. ನಾಗರಿಕರು ಪೊಲೀಸರ ಜತೆ ಸೇರಿ ಮಾದಕ ವಸ್ತುಗಳ ಸೇವನೆ, ಮಾರಾಟ ಮತ್ತು ತಯಾರಿಕೆಗೆ ಕಡಿವಾಣ ಹಾಕಬೇಕು ಎಂದರು.
ಇದೇ ವೇಳೆ ಮಾದಕ ವಸ್ತುಗಳ ಸೇವನೆ ವಿರುದ್ಧ ಸಭಿಕರು ಮತ್ತು ಗಣ್ಯರು ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಯುವ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷರಾದ ದೀಪಕ್‍ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ(ಆಡಳಿತ) ಬಾಹುಬಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಶಿವಣ್ಣ, ಮೈಸೂರು ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ನೌಫಿಲ್ ಅಹಮದ್, ಎನ್‍ಆರ್ ಕ್ಷೇತ್ರದ ಉಪಾಧ್ಯಕ್ಷ ಸೈಯದ್ ರಿಜ್ವಾನ್, ಯುವ ಮುಖಂಡ ಮಾಜಿದ್ ಹಿದಾಯತ್ ಖಾನ್, ದೇವರಾಜ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಫೈರೋಜ್ ಖಾನ್, ಸಾಹುಕಾರ್ ಚನ್ನಯ್ಯ ಬ್ಲಾಕ್ ಉಪಾಧ್ಯಕ್ಷ ಅಲೀಂ ಪಾಷ, ಕೆಆರ್ ಕ್ಷೇತ್ರದ ಉಪಾಧ್ಯಕ್ಷ ಮಲ್ಲೇಶ್ ಮಲ್ಲ ಇನ್ನಿತರ ಯುವ ಕಾಂಗ್ರೆಸ್ ಮುಖಂಡರು ಇದ್ದರು.
ಮೈಸೂರಿನಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಯುವ ಜನಾಂಗವನ್ನು ಗಮನದಲ್ಲಿಟ್ಟುಕೊಂಡು ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಶಾಸಕರಾದ ತನ್ವೀರ್ ಸೇಠ್ ಅವರ ಮಾರ್ಗದರ್ಶನದಲ್ಲಿ ಯುವ ಕಾಂಗ್ರೆಸ್ ವತಿಯಿಂದ ತನ್ವೀರ್ ಸೇಠ್ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿ ಅದು ಭಾರಿ ಯಶಸ್ಸು ಕಂಡಿದೆ. ಈ ಮೂಲಕ ಯುವಕರು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತರಾಗಿದ್ದಾರೆ. ಟೂರ್ನಮೆಂಟ್‍ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
• ಅಬ್ರಾರ್ ಮೊಹಮ್ಮದ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ






