ವರದಿ: ನಿಷ್ಕಲ ಎಸ್., ಮೈಸೂರು
ಮೈಸೂರು : ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯವು ಈ ಭಾಗದಲ್ಲಿ ಭಾವೈಕ್ಯತೆಯ ಕ್ಷೇತ್ರವಾಗಿದೆ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಬಣ್ಣಿಸಿದರು.
ಹೊಸ ವರ್ಷದ ಪ್ರಯುಕ್ತ ದೇವಾಲಯದ ಮುಖ್ಯಸ್ಥರಾದ ಶ್ರೀ ಭಾಷ್ಯಂ ಸ್ವಾಮೀಜಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿ, ಪ್ರೊ.ಭಾಷ್ಯಂ ಸ್ವಾಮೀಜಿ ಅವರು ಈ ಕ್ಷೇತ್ರವನ್ನು ಪುಣ್ಯಕ್ಷೇತ್ರವನ್ನಾಗಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದೆ, ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿದೆ. ಹೊಸ ವರ್ಷದ ಪ್ರಯುಕ್ತ ೨ಲಕ್ಷಕ್ಕೂ ಅಧಿಕ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡುಗಳನ್ನು ವಿತರಿಸಿ ಗಮನಸೆಳೆದಿದ್ದಾರೆ. ಇಡೀ ವಿಶ್ವವೇ ಹೊಸ ವರ್ಷ ಆಚರಣೆ ಮಾಡುತ್ತಿದೆ, ಅವರೊಂದಿಗೆ ನಾವೂ ಹೊಸ ವರ್ಷ ಆಚರಿಸಿಸೋಣ ಎಂದು ಪ್ರೊ. ಭಾಷ್ಯಂ ಸ್ವಾಮೀಜಿ ಅವರು ಜಾತ್ಯತೀತವಾಗಿ, ಧರ್ಮಾತೀತವಾಗಿ ದೇವಾಲಯದಲ್ಲಿ ಹೊಸ ವರ್ಷ ಆಚರಣೆ ಮಾಡುವ ಮೂಲಕ ವಿಶ್ವಮಾನವರಾಗಿದ್ದಾರೆ. ಇಂತಹ ಸಾಮಾನ್ಯ ಜಾಗವನ್ನು ಪವಿತ್ರ ಸ್ಥಾನವನ್ನಾಗಿ ಮಾಡುವ ಮೂಲಕ ಪವಾಡ ಸೃಷ್ಟಿಸಿದ್ದಾರೆ ಎಂದು ಬಣ್ಣಿಸಿದರು.
ಇಡೀ ಪ್ರಪಂಚವೇ ಒಂದು ಪುಟ್ಟಹಳ್ಳಿಯಾಗಿರುವ ಈ ದಿನಗಳಲ್ಲಿ ಯುದ್ಧ ಎನ್ನುವುದು ಒಂದು ಶಾಪವಾಗಿ ಕಾಡುತ್ತಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಒಂದು ಸಾವಿರ ವರ್ಷಕ್ಕೆ ಬೇಕಾಗುವಷ್ಟು ಹಣವನ್ನು ಒಂದೇ ವರ್ಷದಲ್ಲಿ ಯುದ್ಧಕ್ಕಾಗಿ ವ್ಯಯ ಮಾಡಲಾಗುತ್ತಿದೆ. ಈ ದಿನಗಳಲ್ಲಿ ಮನುಕುಲ ಎತ್ತ ಸಾಗುತ್ತಿದೆ ಎನ್ನುವ ಚಿಂತೆಯೂ ಕಾಡುತ್ತಿದ್ದು, ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಬೇಕು ಎಂದು ಹೇಳಿದರು.
