ವರದಿ: ನಜೀರ್ ಅಹಮದ್, ಮೈಸೂರು
ಕರ್ನಾಟಕ ಸರ್ಕಾರ ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದೆಯದರೂ, ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಹಣಕಾಸಿನ ನೆರವನ್ನು ನೀಡಿಲ್ಲ, ಕೂಡಲೇ ಬೇರೆ ಬೇರೆ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಬಿಡುಗಡೆ ಮಾಡಿರುವಂತೆ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೂ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕುಶಲಕರ್ಮಿಗಳ ಕೌಶಲ್ಯಕ್ಕೆ ಹೆಸರುವಾಸಿಯಾದ ಈ ಸಮುದಾಯ ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಮೂಲೆ ಗುಂಪಾಗುತ್ತಿದೆ. ರೆಡಿಮೇಡ್ ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ರೆಡಿಮೇಡ್ ಆಭರಣಗಳು ಸೇರಿದಂತೆ ವಿಶ್ವಕರ್ಮರು ಮಾಡುತ್ತಿದ್ದ ಎಲ್ಲ ವೃತ್ತಿಗಳು ಇಂದು ಕೈಗಾರಿಕೆಗಳ ಪಾಲಾಗಿ, ವಿಶ್ವಕರ್ಮರು ಇಂದು ತಮ್ಮ ವೃತ್ತಿಯನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಸಮುದಾಯದ ಮುಂದಿನ ಬದುಕು ಕುರಿತು ಗಂಭೀರವಾಗಿ ಯೋಚಿಸುವ ಅಗತ್ಯ ಸರ್ಕಾರಕ್ಕಿದೆ. ಮತ್ತು ಸಮುದಾಯದ ಮುಖಂಡರೂ ಸಹ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ವಿಶ್ವಕರ್ಮ ಸಮುದಾಯ ರಾಜ್ಯದಲ್ಲಿ ರಾಜಕೀಯ ಶಕ್ತಿ ಹೊಂದಿಲ್ಲದ ಕಾರಣ ಇವರ ದನಿ ಅಡಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲಿಸುವ ಅಗತ್ಯವಿದೆ.
ಇದರಿಂದ ಈ ಸಮುದಾಯದ ಪರವಾಗಿ ವಿಧಾನ ಸಭೆಯಲ್ಲಿ ಮಾತನಾಡಲು ಹಕ್ಕು ದೊರೆತಂತಾಗುತ್ತದೆ ಎಂದು ಬಸವರಾಜು ಹೇಳಿದರು.
ವಿಶ್ವಕರ್ಮ ಸಮುದಾಯದ ಮುಂದಿನ ಬದುಕಿನ ಬಗ್ಗೆ ಯಾರೂ ಮಾತನಾಡುತ್ತಿಲ್ಲ, ನಮ್ಮ ಮಕ್ಕಳು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗುತ್ತಿದೆ. ಇದರಿಂದ ನಮ್ಮ ಸಮುದಾಯದ ಯುವಕರು ಶಿಕ್ಷಣದಿಂದ, ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ನಮ್ಮದೇ ಸಮುದಾಯದ ಒಬ್ಬ ಶಾಸಕ ಇದ್ದಲ್ಲಿ ನಮ್ಮ ಕಷ್ಟಗಳನ್ನು ಅವರಿಗೆ ಹೇಳಿಕೊಳ್ಳಬಹುದು, ಸರ್ಕಾರದ ಮೇಲೆ ಒತ್ತಡ ತಂದು ಅಗತ್ಯ ಸೌಲಭ್ಯಗಳನ್ನು ಮಾಡಿಸಿಕೊಳ್ಳಬಹುದು, ಈ ವಿಚಾರವಾಗಿ ಸಮುದಾಯದ ಮುಖಂಡರು ಸಹ ಹರಿದು ಹಂಚಿಹೋಗದೆ ಒಂದೇ ವೇದಿಕೆಗೆ ಬಂದು ಸಮುದಾಯದ ಅಭಿವೃದ್ಧಿ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ. ನಾವು ನಮ್ಮ ಒಗ್ಗಟ್ಟು ಪ್ರದರ್ಶಿಸದೇ ಇದ್ದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂದೂ ಸಹ ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದರು.