ಮೈಸೂರು ರಾಜೀವ್‍ನಗರದ 11ನೇ ವಾರ್ಡಿನ ಕೈಫ್ ಮಸೀದಿ ಹಿಂಭಾಗ 8 ಕೋಟಿ ಮೌಲ್ಯದ ಸರ್ಕಾರಿ ಜಮೀನು ಕಬಳಿಕೆ: ಹನುಮಂತರಾಜು ಆರೋಪ

ಸರ್ಕಾರ ಜಮೀನು ವಶಕ್ಕೆ ಪಡೆಯಲು ಸಮಾಜ ರಕ್ಷಣಾ ಸೇನೆ ಆಗ್ರಹ 


 ಮೈಸೂರು: ಕೆಲವು ಖಾಸಗಿ ವ್ಯಕ್ತಿಗಳು ಸೇರಿ ರಾಜೀವನಗರದ 11ನೇ ವಾರ್ಡಿನಲ್ಲಿರುವ ಕೈಫ್ ಮಸೀದಿ ಹಿಂಭಾಗದ ರಾಜಕಾಲುವೆಯ ಪಕ್ಕದಲ್ಲಿರುವ ಸಿಐಟಿಬಿ(ಮೂಡಾ) ಮಾಲಿಕತ್ವದ ಸುಮಾರು 8 ಕೋಟಿ ರೂ ಮೌಲ್ಯದ ಜಾಗವನ್ನು ಕಬಳಿಸಿ ಬಡಾವಣೆ ನಿರ್ಮಿಸುತ್ತಿದ್ದು, ಈ ಬಗ್ಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಮುಡಾ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಕೂಡಲೇ ಜಿಲ್ಲಾಧಿಕಾರಿಗಳು ಈ ಜಾಗವನ್ನು ವಶಕ್ಕೆ ಪಡೆಯಬೇಕೆಂದು ಸಮಾಜ ರಕ್ಷಣಾ ಸೇನೆ ಅಧ್ಯಕ್ಷರಾದ ಕೆ.ಹೆಚ್.ಹನುಮಂತರಾಜು ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಮಾಧ್ಯಮದವರೊಂದಿಗೆ ಮಾತನಾಡಿ, 

ಈ ಜಮೀನು ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕು ಕಸಬಾ ಹೋಬಳಿ, ದೇವನೂರು ಗ್ರಾಮದ 11ನೇ ವಾರ್ಡ್ ರಾಜೀವ್‍ನಗರ, ಸರ್ವೆ ನಂ.216/2, 219/7, 219/8, 215/1 ಮತ್ತು 2 ಎಂದು ಆರ್‍ಟಿಸಿಯಲ್ಲಿ ನಮೂದಾಗಿದೆ. ಇದು ಮೂಡಾ ಲೇ ಔಟ್ ನಕ್ಷೆಯಲ್ಲೂ ಇದೇ ರೀತಿ ನಮೂದಾಗಿದೆ. ಡಿಜಿಟಲ್ ಸ್ಕೆಚ್‍ನಲ್ಲೂ ಸಹ ಸಿಐಟಿಬಿ ಮಾಲಿಕತ್ವ ಎಂದು ತೋರಿಸುತ್ತದೆ. ಇದನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಹೊಂಚು ಹಾಕಿ ಕಳೆದ 10 ದಿನಗಳಿಂದ ಇಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದಾರೆ, 


ಇದಕ್ಕೆ ಯಾವುದೇ ಪರವಾನಗಿ ಪಡೆದಿಲ್ಲ, ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು, ಎಸಿ, ಮತ್ತು ಕೇಸ್ ವರ್ಕರ್‍ಗಳಿಗೆ ಕೇಳಿದರೆ ನಮಗೆ ಮಾಹಿತಿ ಇಲ್ಲ ಎಂದು ಉಡಾಫೆಯಾಗಿ ಉತ್ತರಿಸುತ್ತಾರೆ. ಸದರಿ ಜಾಗವು 21 ಸಾವಿರ ಚದರ ಅಡಿ ಇದ್ದು, ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 8 ಕೋಟಿ ಆಗುತ್ತದೆ. ಕೈಫ್ ಮಸೀದಿ ಹಿಂಭಾಗ ಹರಿಯುವ ರಾಜಕಾಲುವೆಗೆ ಸೇರಿದ ಜಾಗವಾಗಿದ್ದು, ಅಂದಿನ ಸಿಐಟಿಬಿ ಮಾಲಿಕತ್ವ ಎಂದು ದಾಖಲೆಗಳಲ್ಲಿ ನಮೂದಾಗಿದೆ. 

ಕಳೆದ ಹತ್ತು ದಿನಗಳಿಂದ ಕೆಲವು ವ್ಯಕ್ತಿಗಳು ಈ ಜಾಗದಲ್ಲಿ ಬೆಳೆದಿದ್ದ ಗಿಡ ಗಂಟೆಗಳ್ಳನ್ನು ಕಿತ್ತು ಜಾಗವನ್ನು ಸಮತಟ್ಟು ಮಾಡಿ ಮುಡಾ ನಿವೇಶನಗಳು ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾರೆ. ಈ ವಿಚಾರ ಮೈಸೂರು ಮಹಾನಗರಪಾಲಿಕೆ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ದೂರಿನ ಮೂಲಕ ತಿಳಿಸಿದ್ದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಒಂದು ವೇಳೆ ಜನರು ಈ ನಿವೇಶನಗಳನ್ನು ಖರೀದಿಸಿದರೆ ಮುಂದೆ ಅಪಾಯಕ್ಕೆ ಸಿಲುಕುವುದು ನಿಶ್ಚಿತ, ಜನರಿಗೆ ಎಚ್ಚರಿಕೆ ನೀಡಬೇಕಾದ ಅಧಿಕಾರಿಗಳೇ ಕಂಡೂ ಕಾಣದಂತಿದ್ದಾರೆ ಎಂದು ಹನುಮಂತರಾಜು ಹೇಳಿದರು.

ಈ ಹಿಂದೆಯೇ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ನಗರಾಭಿವೃದ್ಧಿ ಸಚಿವರಿಗೆ ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ನಾನು ಲಿಖಿತವಾಗಿ ದೂರು ನೀಡಿದ್ದು, ಇಂದಿಗೂ ಕ್ರಮ ಕೈಗೊಂಡಿಲ್ಲ, ಕೂಡಲೇ ಈ ಜಾಗವನ್ನು ಸರ್ಕಾರ ವಶಕ್ಕೆ ಪಡೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜಕಾಲುವೆಗೆ ಕಂಟಕ

ಕೈಫ್ ಮಸೀದಿ ಹಿಂಭಾಗ ಹರಿಯುವ ರಾಜಕಾಲುವೆ ಪಕ್ಕದ ಬಹುತೇಕ ಜಾಗವನ್ನು ಇಲ್ಲಿನ ಕೆಲವು ವ್ಯಕ್ತಿಗಳು ಕಬಳಿಸಿ ಮುಗ್ದ ಜನರಿಗೆ ಮಾರಾಟ ಮಾಡುತ್ತಿದ್ದಾರೆ, ಈ ಕರಾಳ ದಂಧೆಯನ್ನು ಇಲ್ಲಿನ ಪ್ರಭಾವಿಗಳೇ ನಡೆಸುತ್ತಿರುವುದರಿಂದ ಸಾರ್ವಜನಿಕರು ಪ್ರಶ್ನಿಸುತ್ತಿಲ್ಲ, ಪ್ರಶ್ನಿಸಿದವರಿಗೆ ಬೆದರಿಕೆ ಒಡ್ಡುತ್ತಾರೆ. ಈ ಜಾಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಆಗಲ್ಲ, ರೆವಿನ್ಯೂ ಸೈಟ್ ಮಾದರಿ ನೂರು ರೂ, ಛಾಪಾ ಕಾಗದದಲ್ಲಿ ಬಡೆದುಕೊಡುತ್ತಾರೆ, ಈ ಕಾಗದಕ್ಕೆ ನಯಾಪೈಸೆ ಬೆಲೆ ಇರುವುದಿಲ್ಲ, ಸಾಲ ಸೋಲ ಮಾಡಿ ಜಾಗವನ್ನು ಖರೀದಿಸಿದವರು ಮುಂದೆ ಅಪಾಯಕ್ಕೆ ಸಿಲುಕುವುದು ಖಚಿತ. ಅಲ್ಲದೇ ರಾಜಕಾಲುವೆ ತುಂಬಿ ಹರಿದರೆ, ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗುವ ಸಂಭವ ಇದೆ, ಕಾಲುವೆ ಶುಚಿತ್ವ ಮಾಡಲು ಜಾಗ ಇರುವುದಿಲ್ಲ.

ಹನುಮಂತರಾಜು ಕೆ.ಹೆಚ್., ಅಧ್ಯಕ್ಷರು ಸಮಾಜ ರಕ್ಷಣಾ ಸೇನೆ