ಮೈಸೂರು : ಮಾಜಿ ಸಚಿವ ದಿ.ಅಜೀಜ್ ಸೇಠ್ ನಿಧನದ ನಂತರವೂ ಸತತವಾಗಿ 6 ಬಾರಿ ಗೆಲುವು ಕಂಡಿರುವ, ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನಿಸಿರುವ ನರಸಿಂಹರಾಜ ಕ್ಷೇತ್ರಕ್ಕೆ ಬೇರೆ ಬೇರೆ ಕ್ಷೇತ್ರಗಳ 50 ಸಾವಿರ ಮತದಾರರನ್ನು ಸೇರ್ಪಡೆ ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಸಂಚು ನಡೆದಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಕಾಯಾಧ್ಯಕ್ಷರೂ ಆದ ಶಾಸಕ ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದರು.
ಉದಯಗಿರಿ ಬಡಾವಣೆ 14ನೇ ವಾರ್ಡಿನಲ್ಲಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಎಕ್ಬಾಲ್ ಮತ್ತು ಉಪಾಧ್ಯಕ್ಷ ಷಹೆನ್ ಷಾ ಅಹಮದ್ ನೇತೃತ್ವದಲ್ಲಿ ವೋಟ್ ಚೋರಿ (ಮತಗಳ್ಳತನ) ವಿರುದ್ಧ ಸಹಿ ಸಂಗ್ರಹ ಅಭಿಯಾನ ಪತ್ರಕ್ಕೆ ಸಹಿ ಮಾಡುವುದರ ಮೂಲಕ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಒಂದು ದೊಡ್ಡ ಹುನ್ನಾರ ಕಳೆದ ಹಲವು ಚುನಾವಣೆಗಳಲ್ಲಿ ನಡೆದಿದೆ, ಪ್ರಾರಂಭದಲ್ಲಿ ಇದು ಅರಿವಿಗೆ ಬಂದಿರಲಿಲ್ಲ, ಆದರೇ, ಕಳೆದ ಲೋಕಸಭಾ ಚುನಾವಣೆಯ ನಂತರ ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ದೇಶದ ಚುನಾವಣಾ ಫಲಿತಾಂಶಗಳ ವರದಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ವೋಟ್ ಚೋರಿ ಪ್ರಕರಣವನ್ನು ಬೆಳಕಿಗೆ ತಂದರು, ಇದಕ್ಕೆ ದೇಶದ ಯಾವುದೇ ಮಾಧ್ಯಮಗಳು ಮತ್ತು ಕಾಂಗ್ರೆಸ್ ಹೊರತುಪಡಿಸಿ ಇತರೆ ಪಕ್ಷಗಳು ರಾಹುಲ್ ಗಾಂಧಿಗೆ ಅಗತ್ಯ ಬೆಂಬಲ ನೀಡಲಿಲ್ಲ, ಇದೀಗ ಮತಗಳ್ಳತನ ಎಲ್ಲರ ಕಣ್ಣು ತೆರೆಸಿದೆ, ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಮತದಾರರ ಪಟ್ಟಿಯಲ್ಲಿ ನಕಲಿ ಹೆಸರುಗಳ ಸೇರ್ಪಡೆ, ನಕಲಿ ವಿಳಾಸಗಳ ಸೃಷ್ಟಿ, ಕ್ಷೇತ್ರದವರೇ ಅಲ್ಲದ ಅನಾಮಿಕರ ಲಕ್ಷಾಂತರ ಹೆಸರುಗಳ ಸೇರ್ಪಡೆ, ಅಮಾನ್ಯ ಫೋಟೋಗಳು, ಗುಂಪು ನೋಂದಣಿ ಮೂಲಕ ಕೊಟ್ಯಾಂತರ ನಕಲಿ ಮತಗಳು ದೇಶದ ಚುನಾವಣೆಯನ್ನು ನಿರ್ಧರಿಸುತ್ತಿವೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಸ್ವಚ್ಛ ಮತ್ತು ಪಾರದರ್ಶಕ ಮತದಾರರ ಪಟ್ಟಿ ತಯಾರಿಸುವುದು, ಡಿಜಿಟಲ್ ಮತ್ತು ಪರಿಶೀಲಿಸಬಹುದಾರ ಮತದಾರರ ಪಟ್ಟಿ ತಯಾರಿಕೆ ಮತ್ತು ಸ್ವತಂತ್ರ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗಕ್ಕೆ ಆಗ್ರಹಿಸುತ್ತಾ, ಇಡೀ ದೇಶದ ಮತದಾರರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದೆ ಎಂದರು.
ಮತದಾರರು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಅಥವಾ ವೋಟ್‍ಚೋರಿ.ಇನ್‍ನಲ್ಲಿ ಸಹಿ ಮಾಡಿ ಡಿಜಿಟಲ್ ಪ್ರಮಾಣ ಪತ್ರ ಪಡೆಯಿರಿ ಎಂದು ಸಲಹೆ ನೀಡಿದರು. ಮತಗಳ್ಳತನ ತಡೆಯುವಲ್ಲಿ ಸ್ಥಳೀಯ ಮುಖಂಡರ ಪಾತ್ರ ಮುಖ್ಯವಾಗಿದೆ. ಸಂಸ್ಥೆಗಳಲ್ಲಿ ಪ್ರತಿನಿಧಿಸಲು ಆಸಕ್ತಿ ಇರುವ ಮುಖಂಡರು ತಮ್ಮ ತಮ್ಮ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದೆಯಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು, ಅಲ್ಲದೇ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದೆ ಗೆಲ್ಲುತ್ತಾರೆ ಎಂಬ ಕ್ಷೇತ್ರಗಳಲ್ಲಿ ಬೇರೆ ಬೇರೆ ಕ್ಷೇತ್ರಗಳ ಮತದಾರರನ್ನು ಸೇರ್ಪಡೆ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಯತ್ನವೂ ನಡೆಯುತ್ತಿದೆ, ಇದಕ್ಕೆ 14ನೇ ವಾರ್ಡಿನಲ್ಲಿ ಅಲ್ಪ ಮತಗಳಿಂದ ಪರಾಭವಗೊಂಡ ಷಹೀನ್ ಷಾ ಸಾಕ್ಷಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಗೆಲ್ಲಲೇ ಬೇಕಾದ ನಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದಾರೆ ಇದಕ್ಕೆ ವೋಟ್ ಚೋರಿಯೇ ಪ್ರಮುಖ ಕಾರಣ ಎಂದರು.
ಬಿಹಾರ ರಾಜ್ಯದಲ್ಲಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಸುಮಾರು 62 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು, ಕೈಬಿಟ್ಟ ಮತದಾರರ ಪಟ್ಟಿಯನ್ನು ಕೊಡಿ ಎಂದು ನಾವು ಚುನಾವಣಾ ಆಯೋಗವನ್ನು ಕೇಳಿದ್ದೇವೆ, ಆದರೇ ಇಂದಿಗೂ ಆ ಪಟ್ಟಿಯನ್ನು ಕೊಟ್ಟಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್,ಮೂರ್ತಿ, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಎಕ್ಬಾಲ್, ಉಪಾಧ್ಯಕ್ಷ ಷಹೆನ್ ಷಾ ಅಹಮದ್, ನಗರಪಾಲಿಕೆ ಮಾಜಿ ಸದಸ್ಯರಾದ ಉದಯಕುಮಾರ್, ಹಷರತ್, ಪ್ರದೀಪ್ ಕುಮಾರ್, ಕೆಪಿಸಿಸಿ ಸಂಯೋಜಕ ಶೌಕತ್ ಅಲಿ ಖಾನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸೀಂ, ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಖೈಸರ್, ಕಾರ್ಮಿಕ ವಿಭಾಗದ ಅಧ್ಯಕ್ಷ ಮೊಹಮ್ಮದ್ ಶಿಫ್ಟನ್, ಯುವ ಮುಖಂಡ ಅಫ್ರೋಜ್ ಖಾನ್, ವಕ್ತಾರ ಮಾಜಿದ್, ಎಸ್.ರಾಜೇಶ್, ಸೈಯದ್ ಫಾರೂಖ್ ಮತ್ತಿತರರು ಇದ್ದರು.
ನರಸಿಂಹರಾಜ ಕ್ಷೇತ್ರದಲ್ಲಿ 2004 ರಲ್ಲಿ 2.36 ಲಕ್ಷ ಮತದಾರರು ಇದ್ದರು, 2018 2.96 ಲಕ್ಷ, 2023 ರಲ್ಲಿ 3.16 ಲಕ್ಷ ಮತದಾರರು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ, 204 ಮತಗಟ್ಟೆಗಳು ಇದ್ದ ನಮ್ಮ ಕ್ಷೇತ್ರದಲ್ಲಿ ಇಂದು 310 ಮತಗಟ್ಟೆಗಳಾಗಿವೆ. ಯಾವುದೇ ಚುನಾವಣೆಯೂ ನಡೆದಿಲ್ಲ, ಮತದಾರರ ಪಟ್ಟಿಯ ಪರಿಷ್ಕರಣೆಯೂ ನಡೆದಿಲ್ಲ, ಒಂದು ಮತಗಟ್ಟೆಯಲ್ಲಿ ಸುಮಾರು 1200 ಮತದಾರರು ಇರುತ್ತಾರೆ. ಈ ಪ್ರಕಾರ ನಮ್ಮ ಕ್ಷೇತ್ರದಲ್ಲಿ 3 ಲಕ್ಷಕ್ಕೂ ಅಧಿಕ ಮತದಾರರು ಇದ್ದು, 50 ಸಾವಿರ ಹೊಸ ಮತದಾರರ ಸೇರ್ಪಡೆಯಾಗಿವೆ. ವಾಸ್ತವದಲ್ಲಿ ನನ್ನ ಕ್ಷೇತ್ರದಲ್ಲಿ ವಾಸದ ಮನೆಗಳ ಸಂಖ್ಯೆ ಕಡಿಮೆಯಾಗುತ್ತಿವೆ, ವಾಣಿಜ್ಯ ಚಟುವಟಿಕೆ ಹೆಚ್ಚಾಗಿದೆ. ಆದರೇ ಮತದಾರರ ಸಂಖ್ಯೆ ಹೆಚ್ಚಳ ಆಶ್ವರ್ಯ ತಂದಿದೆ. ಸ್ಥಳೀಯ ಸಂಸ್ಥೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ವಾರ್ಡ್ ವ್ಯಾಪ್ತಿ ಕಚೇರಿ ತೆರೆದು ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ನಡೆಸಬೇಕು.
• ತನ್ವೀರ್ ಸೇಠ್, ಶಾಸಕರು