ತನ್ವೀರ್ ಸೇಠ್ ಹುಟ್ಟುಹಬ್ಬದ ಪ್ರಯುಕ್ತ ದರ್ಗಾ, ದೇವಾಲಯ ಚರ್ಚ್‌ನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಎಂ.ರಸೂಲ್

ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು: ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವರಾದ ತನ್ವೀರ್ ಸೇಠ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ರಸೂಲ್ ಅವರು ತಮ್ಮ ನೂರಾರು ಅಭಿಮಾನಿಗಳ ಜತೆಗೂಡಿ ಇಲ್ಲಿನ ದರ್ಗಾ, ಚರ್ಚ್ ಮತ್ತು ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿ ತನ್ವೀರ್ ಸೇಠ್ ಅವರ ಸುಖ, ಶಾಂತಿ ಮತ್ತು ಸಮೃದ್ಧಿಗೆ ಪ್ರಾರ್ಥನೆ ಸಲ್ಲಿಸಿದರಲ್ಲದೇ ಅವರಿಗೆ ಸಚಿವ ಸ್ಥಾನ ಸಿಗಲೆಂದು ವಿಶೇಷ ಅರ್ಚನೆ ಮಾಡಿಸಿದರು.

ಶುಕ್ರವಾರ ಮದ್ಯಾಹ್ನ ಮಸೀದಿಗಳಲ್ಲಿ ನಡೆದ ವಿಶೇಷ ಪ್ರಾರ್ಥನೆ ಬಳಿಕ ನಗರದ ಇಮಾಂ ಶಾ ವಲಿ ದರ್ಗಾಕ್ಕೆ ಆಗಮಿಸಿದ ಅವರು ಹಜರತ್ ಇಮಾಂ ಶಾ ವಲಿ ಅವರಿಗೆ ಚಾದರ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಾಸಕ ತನ್ವೀರ್ ಸೇಠ್ ಅವರಿಗೆ ಸರ್ವಶಕ್ತನಾದ ಅಲ್ಲಾಹನು ಆರೋಗ್ಯ ಮತ್ತು ದೀರ್ಘಾಯಸ್ಸು ಕರುಣಿಸಲಿ ಮತ್ತು ಮುಂಬರುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಅವರು ಮೈಸೂರು-ಬೆಂಗಳೂರು ಹೈವೆ ರಸ್ತೆಯಲ್ಲಿರುವ ದಂಡಿ ಮಾರಮ್ಮನ ದೇವಾಲಯಕ್ಕೆ ಕಾಂಗ್ರೆಸ್ ಪಕ್ಷದ ನೂರಾರು ಬೀದಿ ಬದಿ ವ್ಯಾಪಾರಿಗಳ ಜತೆ ಆಗಮಿಸಿ ದಂಡಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅಲ್ಲಿನ ಅರ್ಚಕರು ತನ್ವೀರ್ ಸೇಠ್ ಹೆಸರಲ್ಲಿ ವಿಶೇಷ ಅರ್ಚನೆ ನೆರವೇರಿಸಿ ಶಾಸಕ ತನ್ವೀರ್ ಸೇಠ್ ಅವರಿಗೆ ಆರೋಗ್ಯ, ಆಯಸ್ಸು ಮತ್ತು ಸಚಿವ ಸ್ಥಾನ ಸಿಗಲೆಂದು ಪ್ರಾರ್ಥಿಸಿದರು.

ಬಳಿಕ ಅವರು ಮೈಸೂರಿನ ಹೆಸರಾಂತ ಸಂತ ಫಿಲೋಮಿನಾ ಚರ್ಚ್‌ಗೆ ಆಗಮಿಸಿ ಫಾದರ್ ಅಲೆಕ್ಸ್ ಫ್ರಾನ್ಸೀಸ್ ಪ್ರಶಾಂತ್ ಸೀಕ್ವೇರಾ ಅವರನ್ನು ಭೇಟಿ ಮಾಡಿ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಕರುಣಾಮಯಿ ಏಸು ಸ್ವಾಮಿಯನ್ನು ಪ್ರಾರ್ಥಿಸುವಂತೆ ಕೋರಿದರ ಮೇರೆಗೆ ಫಾದರ್ ಅಲೆಕ್ಸ್ ಫ್ರಾನ್ಸೀಸ್ ಪ್ರಶಾಂತ್ ಸೀಕ್ವೇರಾ ಅವರು ಪ್ರಾರ್ಥನೆ ಸಲ್ಲಿಸಿ ತನ್ವೀರ್ ಸೇಠ್ ಅವರಿಗೆ ದಯಾಮಯನಾದ ಏಸು ಸ್ವಾಮಿಯು ಎಲ್ಲ ಸೌಭಾಗ್ಯಗಳನ್ನು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಇಮಾಂ ಶಾ ವಲಿ ದರ್ಗಾದ ಮುಝಾವರ್ ಆದ ಮೊಹಮ್ಮದ್ ನಖೀಬುಲ್ಲಾ ಷಾ, ದಂಡಿ ಮಾರಮ್ಮನ ದೇವಾಲಯದ ಅರ್ಚಕರು ಮತ್ತು ಸಂತ ಫಿಲೋಮಿನಾ ಚರ್ಚ್‌ನ ಫಾದರ್ ಅಲೆಕ್ಸ್ ಫ್ರಾನ್ಸೀಸ್ ಪ್ರಶಾಂತ್ ಸೀಕ್ವೇರಾ ಅವರನ್ನು ಎಂ.ರಸೂಲ್ ಅವರು ಫಲ ತಾಂಬೂಲ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಬೀದಿ ಬದಿ ವ್ಯಾಪಾರಿಗಳ ಸಂಘದ ನಾಸೀರ್ ಭಾಯ್, ಮೊಹಮ್ಮದ್ ಸಾದೀಖ್ ಖಾನ್, ಜುನೇದ್, ಯಾಸೀನ್ ಖಾನ್, ನಯಾಜ್ ಖಾನ್, ಏಜಾಸ್, ಶರೀಖ್, ಅಲೀಂ, ಮೊಹಮ್ಮದ್ ಮುಹೀಬ್, ಆರೀಫ್, ಸಿದ್ದೀಖ್, ನಾಹೀದ್, ಎಸ್.ಸಾದೀಖ್ ಪಾಷ, ನಯಾಜ್ ಮುಂತಾದವರು ಇದ್ದರು.


ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು, ಸೋಲಿಲ್ಲದ ಸರದಾರರೂ ಆದ ತನ್ವೀರ್ ಸೇಠ್ ಅವರು ಸಜ್ಜನ ರಾಜಕಾರಣಿಗಳು, ಎಲ್ಲ ಜಾತಿ, ಧರ್ಮಗಳನ್ನು ಸಮಾನತೆಯಿಂದ ಕಂಡು ಕ್ಷೇತ್ರದ ಅಭಿವೃದ್ಧಿಗೆ ಅವಿತರವಾಗಿ ದುಡಿಯುತ್ತಿದ್ದಾರೆ. ಇವರ ಜನಪರ ಕೆಲಸಗಳನ್ನು ಮೆಚ್ಚು ಕ್ಷೇತ್ರದ ಜನರು ಸತತವಾಗಿ ೬ ಬಾರಿ ಗೆಲ್ಲಿಸಿದ್ದಾರೆ. ಮುಂಬರುವ ಸಚಿವ ಸಂಪುಟ ವಿಸ್ತರಣೆ ವೇಳೆ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ದೇವಾಲಯ, ದರ್ಗಾ ಮತ್ತು ಚಚ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳ ಜತೆಗೂಡಿ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲಾಗಿದೆ.

ಎಂ.ರಸೂಲ್, ಅಧ್ಯಕ್ಷರು.