ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ಪ್ರತ್ಯೇಕ ಮಡಿವಾಳ ಸಂಘಟನೆಯ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟಾಗಿ ಸಮುದಾಯದ ಅಭಿವೃದ್ಧಿಗೆ ದುಡಿಯುವ ಸಂಕಲ್ಪ ಕೈಗೊಂಡರು.
ಕರ್ನಾಟಕ ರಾಜ್ಯ ಮಡಿವಾಳ ಮಾಚಿದೇವರ ಸಂಘದ ರಾಜ್ಯಾಧ್ಯಕ್ಷರಾದ ಮಂಜುಶೆಟ್ಟಿ, ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಮತ್ತು ಮೈಸೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾದ ರವಿನಂದನ ಅವರು ಭಾನುವಾರ ಸಂಜೆ ನಗರದಲ್ಲಿ ಸಮುದಾಯದ ಬಂಧುಗಳ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರ ಕೈ ಕುಲುಕಿದರು.
ಈ ವೇಳೆ ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರು ಮಾತನಾಡಿ, ನಮ್ಮ ಮೂರು ಸಂಘಟನೆಗಳ ಉದ್ದೇಶ ಒಂದೇ ಆಗಿರುವುದರಿಂದ ನಾವುಗಳು ಯಾವುದೇ ವೈಷಮ್ಯ, ದ್ವೇಷ, ಅಸೂಯೆ ಇಲ್ಲದೇ ಒಗ್ಗಟ್ಟಾಗಿ ಸಮುದಾಯದ ಅಭಿವೃದ್ಧಿಗೆ ದುಡಿಯುತ್ತೇವೆ. ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ನಮ್ಮ ಮಡಿವಾಳ ಸಮುದಾಯ ತೀರಾ ಹಿಂದುಳಿದಿದೆ. ಮೊದಲು ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಉನ್ನತ ಶಿಕ್ಷಣ ಪಡೆಯಲು ಅನಾನುಕೂಲ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯ ಒದಗಿಸಲು ಬೇಕಾದ ವ್ಯವಸ್ಥೆ ಮಾಡುವುದು. ಸರ್ಕಾರದಿಂದ ಸಿಗುವು ಸೌಲಭ್ಯಗಳ ಬಗ್ಗೆ ಸಮುದಾಯದ ಅವಿದ್ಯಾವಂತ ಜನರಿಗೆ ಮಾರ್ಗದರ್ಶನ ನೀಡುವುದು, ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಅಗತ್ಯವಾಗಿ ಬೇಕಾದ ಆರ್ಥಿಕ ಸೌಲಭ್ಯಗಳನ್ನು ಸಂಬಂಧಪಟ್ಟ ಬ್ಯಾಂಕುಗಳಿಂದ ಕೊಡಿಸಲು ಮುಂದಾಗುವುದು ಸೇರಿದಂತೆ ಇತರೆ ಸಮುದಾಯದ ಅಭಿವೃದ್ಧಿ ಕೆಲಸಗಳನ್ನು ನಾವು ಒಗ್ಗಟ್ಟಾಗಿ ಮಾಡುತ್ತೇವೆ. ಸಂಘಟನೆ ಯಾವುದಾದರೇನು ನಮ್ಮ ಉದ್ದೇಶ ಒಂದೇ ಆಗಿರುವುದರಿಂದ ನಾವು ಒಂದಾಗಿ ಕೆಲಸ ಮಾಡುತ್ತೇವೆ ಎಂದರು.
0 ಕಾಮೆಂಟ್‌ಗಳು