ಮೈಸೂರು : ಇಂಡಿಯಾ ಎಂದರೆ ಕೇವಲ ಪ್ರಧಾನಿ ನರೇಂದ್ರ ಮೋದಿ ಅಥವಾ ಭಾರತೀಯ ಜನತಾ ಪಕ್ಷವಲ್ಲ, ಅದು 135 ಕೋಟಿ ಪ್ರಜೆಗಳ ಶಕ್ತಿ, ಕೆಲವು ಮಾಧ್ಯಮಗಳು ದೇಶ ಎಂದರೆ ಮೋದಿ, ದೇಶ ಎಂದರೆ ಬಿಜೆಪಿ ಎಂದು ಬಿಂಬಿಸುವುದನ್ನು ಬಿಡಬೇಕು ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ರೇಹಾನ್ ಬೇಗ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಇನ್ಸ್‍ಟ್ರಾಗ್ರಾಂ’ನಲ್ಲಿ ಅವರು ಹೇಳಿರುವ ವೀಡಿಯೋ ಇದೀಗ ವೈರಲ್ ಆಗಿ ಜನರ ಗಮನ ಸೆಳೆಯುತ್ತಿದೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳವು ನಡೆಸಿ ದೇಶದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಅವರು ಮಾಡಿರುವ ಗಂಭೀರ ಆರೋಪಕ್ಕೆ ಪ್ರಧಾನಿ ಉತ್ತರ ನೀಡಿಲ್ಲ, ಇದನ್ನು ಮಾಧ್ಯಮಗಳು ಸಹ ಪ್ರಶ್ನಿಸುತ್ತಿಲ್ಲ, ಆದರೇ, ಪ್ರಧಾನಿ ಕಾರ್ಯನಿಮಿತ್ತ ವಿದೇಶಕ್ಕೆ ಹೋದರೆ ನಮ್ಮ ಮಾಧ್ಯಮಗಳು ಭಾರತ ದೇಶ ಮೋದಿ ಅವರಿಂದಲೇ ನಡೆಯುತ್ತಿದೆ, ಬಿಜೆಪಿಯೇ ಭಾರತದ ಶಕ್ತಿ ಎಂದು ಹೊಗಳುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ. 

ಪ್ರಧಾನಿಯಿಂದ ಅವರ ಮಿತ್ರರಾದ ಅದಾನಿ, ಅಂಬಾನಿ, ನಿರವ್ ಮೋದಿ, ಮೆಹುಲ್ ಚೋಕ್ಸಿ ಅವರಿಗೆ ಅನುಕೂಲ ಆಗಿದೆಯೇ ವಿನಃ, ದೇಶದ ಜನರಿಗೆ ಯಾವುದೇ ಗಮನಾರ್ಹ ಅನುಕೂಲಗಳಾಗಿಲ್ಲ, ಕಳೆದ 10 ವರ್ಷಗಳಿಂದ ಮನ್ ಕಿ ಬಾತ್ ಕೇಳಿ ಕೇಳಿ ರೋಸಿಹೋಗಿದೆ. ಮೋದಿಜಿ ಮನ್ ಕಿ ಬಾತ್ ಬೇಡ, ನಮ್ಮ ರೀತಿ ಕಾಮ್ ಕಿ ಬಾತ್ ಮಾತನಾಡಿ ಎಂದು ರೇಹಾನ್ ಬೇಗ್ ಒತ್ತಾಯಿಸಿದ್ದಾರೆ.

ಪ್ರಧಾನಿ ನಮ್ಮ ದೇಶದ ಪ್ರತಿನಿಧಿಯಾಗಿ ವಿದೇಶಕ್ಕೆ ಹೋಗುತ್ತಾರೆ. ಅವರ ಹಿಂದೆ ದೇಶದ 135 ಕೋಟಿ ಜನರ ಶಕ್ತಿ ಇರುತ್ತದೆ. ಹಾಗಾಗಿ ವಿದೇಶದಲ್ಲಿ ಭಾರತದ 135 ಕೊಟಿ ಜನರ ಶಕ್ತಿಗೆ ಗೌರವ ಸಿಗುತ್ತದೆಯೇ ವಿನಃ ಕೇವಲ ಪ್ರಧಾನಿಗೆ ಮಾತ್ರ ಗೌರವ ಸಿಗುವುದಿಲ್ಲ, ಆದರೇ, ನಮ್ಮ ಕೆಲವು ಮಾಧ್ಯಮಗಳು ದೇಶದ ಜನರನ್ನೆ ಮರೆತು ಕೇವಲ ಪ್ರಧಾನಿಯನ್ನೆ ಬಿಂಬಿಸುವುದು ಎಷ್ಟು ಸರಿ? ಸಂವಿಧಾನದ 4ನೇ ಸ್ತಂಭ ಎನಿಸಿರುವ ಮಾಧ್ಯಮಗಳು ಯಾವುದೇ ವಿಷಯವನ್ನು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಜನರಿಗೆ ಮುಟ್ಟಿಸುವ ಮೂಲಕ ತಮ್ಮ ಕರ್ತವ್ಯ ಪಾಲನೆ ಮಾಡಬೇಕಿದೆ. 

ನೀವು ಪ್ರಧಾನಿಯವರನ್ನೂ ತೋರಿಸಿ ಜತೆಗೆ ನಮ್ಮ ದೇಶವನ್ನೂ, ದೇಶದ ಪರಿಸ್ಥಿತಿಯನ್ನೂ, ಜನರ ದನಿಯನ್ನೂ ವಾಸ್ತವತೆಯನ್ನು ಎತ್ತಿ ಹಿಡಿಯಿರಿ. ಇದು ಮಾಧ್ಯಮಗಳ ಜವಾಬ್ದಾರಿಯೂ ಹೌದಲ್ಲವೇ.. ಎಂದು ರೇಹಾನ್ ಬೇಗ್ ಹೇಳಿದ್ದಾರೆ.