ಕಾರ್ಮಿಕರಿಗೆ ಶೋಷಣೆ ಆರೋಪ : ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಲು ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಸೆ.15 ರಿಂದ 4 ದಿನಗಳ ಕೈಗಾರಿಕಾ ಪ್ರದೇಶಗಳಲ್ಲಿ ಜಾಗೃತಿ ಜಾಥ

 

ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಮೈಸೂರಿನ ಕೈಗಾರಿಕಾ ಪ್ರದೇಶಗಳಲ್ಲಿರುವ ವಿವಿಧ ಖಾಸಗಿ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗ ಕಾರ್ಮಿಕರಿಗೆ ಆಗುತ್ತಿರುವ ಅನೇಕ ರೀತಿಯ ಶೋಷಣೆಗಳ ಬಗ್ಗೆ ದೂರು ಕೇಳಿಬಂದಿದ್ದು, ಇದನ್ನು ತಪ್ಪಿಸಲು ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಸೆ, 15 ರಿಂದ ನಾಲ್ಕು ದಿನಗಳ ಕಾಲ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೆ.15 ರಿಂದ ಪ್ರಾರಂಭವಾಗುವ ಈ ಜಾಗೃತಿ ಜಾಥ ಹೂಟಗಳ್ಳಿ, ಕೂರ್ಗಳ್ಳಿ, ಹೆಬ್ಬಾಳ್ ಮತ್ತು ಮೇಟಗಳ್ಳಿ ಪ್ರದೇಶಗಳಲ್ಲಿ ನಾಲ್ಕು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ಮೊದಲ ದಿನದ ಉದ್ಘಾಟನೆಯನ್ನು ಶಾಸಕರಾದ ಜಿ.ಟಿ.ದೇವೇಗೌಡ ಅವರು ನೆರವೇರಿಸಲಿದ್ದಾರೆ ಎಂದರು.

ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಕಡ್ಡಾಯವಾಗಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತೀಯರಿಗೆ ಕೆಲಸ ನೀಡಲಾಗುತ್ತಿದೆ. ನಮ್ಮ ನೆಲ, ಜಲ ಮತ್ತು ಪರಿಸರವನ್ನು ಹಾಳು ಮಾಡುತ್ತಿರುವುದಲ್ಲದೇ ಸ್ಥಳೀಯರನ್ನು ಉದ್ಯೋಗ ವಂಚಿತರನ್ನಾಗಿ ಮಾಡಲಾಗುತ್ತಿದೆ. ದಿನಗೂಲಿ ನೌಕರರಿಗೆ ಕನಿಷ್ಠ ವೇತನ ನೀಡುತ್ತಿಲ್ಲ, 12 ಗಂಟೆ ಕಾಲ ದುಡಿಸಿಕೊಳ್ಳಲಾಗುತ್ತಿದೆ. ಕಾರ್ಖಾನೆಗಳ ಕ್ಯಾಂಟಿನ್‍ಗಳಲ್ಲೂ ಪರ್ಮನೆಂಟ್ ನೌಕರರಿಗೆ ಉತ್ತಮ ಗುಣಮಟ್ಟದ ಊಟ ನೀಡಿದರೆ, ದಿನಗೂಲಿ ನೌಕರರಾಗಿರುವ ಸ್ಥಳೀಯರಿಗೆ ಗುಣಮಟ್ಟದ ಊಟ ನೀಡುತ್ತಿಲ್ಲ, ಬಹಳಷ್ಟು ಕಾರ್ಖಾನೆಗಳಲ್ಲಿ ಕಾರ್ಮಿಕರಿಂದ ಇಎಸ್‍ಐ, ಪಿಎಫ್ ವಂತಿಗೆ ಕಡಿತ ಮಾಡಿಕೊಂಡರೂ ಕಾರ್ಖಾನೆ ಪಾಲು ಸೇರಿಸಿ ಸಂಬಂದ್ಧ ಪಟ್ಟ ಇಲಾಖೆಗೆ ಹಣ ಜಮೆ ಮಾಡುತ್ತಿಲ್ಲ, ಆರೋಗ್ಯ ಸೌಲಭ್ಯವನ್ನೂ ಸಹ ನೀಡುತ್ತಿಲ್ಲ, ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡುತ್ತಿಲ್ಲ, ಸುರಕ್ಷತೆಯಂತೂ ಮರೀಚಿಕೆಯಾಗಿದೆ. ಇತ್ತ ಸ್ಥಳೀಯರಿಗೆ ಉದ್ಯೋಗವನ್ನೂ ನೀಡದ ಖಾಸಗಿ ಕಾರ್ಖಾನೆಗಳು ನಮ್ಮ ನೆಲ, ಜಲ ಮತ್ತು ಪರಿಸರವನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ. ಇವೆಲ್ಲದರ ರಕ್ಷಣೆ ಮಾಡುವುದು ಸೇರಿದಂತೆ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಸೆ.15 ರಿಂದ 18 ರವರೆಗೆ ನಾಲ್ಕು ದಿನಗಳ ಕಾಲಾ ಕೈಗಾರಿಕಾ ಪ್ರದೇಶಗಳಲ್ಲಿ ಜಾಗೃತಿ ಜಾಥಾ ನಡೆಸಲಾಗುವುದು. ಮೊದಲ ದಿನ ಸೋಮವಾರ ಹೂಟಗಳ್ಳಿ, ಮಂಗಳವಾರ ಕೂರ್ಗಳ್ಳಿ ಬುಧವಾರ ಹೆಬ್ಬಾಳು ಮತ್ತು ಗುರುವಾರ ಮೇಟಗಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಜಾಗೃತಿ ಜಾಥ ನಡೆಸಿ ಕಾರ್ಖಾನೆಗಳ ಮುಖ್ಯಸ್ಥರಿಗೆ ಸರ್ಕಾರದ ಕಾನೂನು ಮತ್ತು ಕಟ್ಟಳೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ, ಕಾರ್ಮಿಕರಿಗೆ ವೇತನ ತಾರತಮ್ಯ ಮತ್ತು ಊಟೋಪಚಾರದಲ್ಲಿ ನಡೆಯುತ್ತಿರುವ ತಾರತಮ್ಯವನ್ನು ತಪ್ಪಿಸಬೇಕು ಇಲ್ಲದಿದ್ದಲ್ಲ ಅಂತಹ ಕಾರ್ಖಾನೆ ವಿರುದ್ಧ ದೂರು ನೀಡುವುದಲ್ಲದೇ ಸಂಘಟನೆಯಿಂದ ಪ್ರತಿಭಟನೆಯನ್ನೂ ಸಹ ನಡೆಸುವ ಎಚ್ಚರಿಕೆ ನೀಡಲಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಡಿಪಿಕೆ ಪರಮೇಶ್, ರಾಜ್ಯ ಖಜಾಂಚಿ ನಂಜುಂಡ, ಮೈಸೂರು ಜಿಲ್ಲಾ ಅಧ್ಯಕ್ಷ ಸಂತೋಷ್, ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷರಾದ ಮಂಜುಳ, ಪದಾಧಿಕಾರಿಗಳಾದ ಸಿಂಧುವಳ್ಳಿ ಶಿವಕುಮಾರ್, ಮನುಗೌಡ,  ಸೋಮಶೇಖರ, ಗೌತಮ್, ಅನುರಾಜ್ ಗೌಡ, ಮಂಜುನಾಥ್, ಸಿದ್ದೇಗೌಡ ಮುಂತಾದವರು ಇದ್ದರು.

ನಾಮಫಲಕದಲ್ಲಿ ಕನ್ನಡ ಕಡ್ಡಾಯ

ಮೈಸೂರಿನ ಕೈಗಾರಿಕಾ ಪ್ರದೇಶಗಳಲ್ಲಿರುವ ಬಹುತೇಕ ಕಾರ್ಖಾನೆಗಳ ನಾಮಫಕಗಳಲ್ಲಿ ಕನ್ನಡ ಭಾಷೆ ಬಳಸಿಲ್ಲ, ಇದು ಖಂಡನೀಯ, ಸರ್ಕಾರ ಶೇ. 60 ರಷ್ಟು ಕನ್ನಡ ಬಳಕೆ ಕಡ್ಡಾಯ ಎಂದು ಕಾನೂನು ಮಾಡಿದ್ದರೂ ಕಾರ್ಖಾನೆಯವರು ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೇ ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸುತ್ತಿಲ್ಲ, ವ್ಯವಹಾರದಲ್ಲೂ ಕನ್ನಡ ಭಾಷೆ ಬಳಕೆ ಮಾಡುವಂತೆ ಕೈಗಾರಿಕಾ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ ನಂತರ ಪಾಲನೆ ಮಾಡದಿದಲ್ಲಿ ಪ್ರತಿಭಟನೆ ನಡೆಸಲಾಗುವುದು.

ಬಿ.ಬಿ.ರಾಜಶೇಖರ್, ಅಧ್ಯಕ್ಷರು. ಕನ್ನಡಾಂಬೆ ರಕ್ಷಣಾ ವೇದಿಕೆ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು