ಮೈಸೂರು ಮಹಾನಗರ ಪಾಲಿಕೆಯಿಂದ ಫುಡ್ ಸ್ಟ್ರೀಟ್ ಧ್ವಂಸ : ಬೀದಿ ಬದಿ ವ್ಯಾಪಾರಿಗಳ ಆಕ್ರೋಶ; ಪರಿಹಾರ ನೀಡುವಂತೆ ಎಂ.ರಸೂಲ್ ಆಗ್ರಹ

ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಆ.1 ರಂದು ಭಾರತದ ರಾಷ್ಟ್ರಪತಿಗಳು ಮೈಸೂರಿಗೆ ಆಗಮಿಸುವ ಹಿನ್ನಲೆ ಇಲ್ಲಿನ ಲಲಿತ್ ಮಹಲ್ ಹೋಟೆಲ್ ಮುಂಭಾಗದ ಫುಡ್ ಸ್ಟ್ರೀಟ್ ಅನ್ನು ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತೆರವಿಗೂ ಮುನ್ನ ನಮಗೆ ಯಾವುದೇ ಮುನ್ಸೂಚನೆ ನೀಡಿಲ್ಲ, ಸಾಲ ಮಾಡಿ ತಳ್ಳುವ ಗಾಡಿಗಳಿಗೆ ಬಂಡವಾಳ ಹಾಕಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಪಾಲಿಕೆ ಅಧಿಕಾರಿಗಳು ದಿಢೀರನೆ ಬಂದು ಜೆಸಿಬಿ ಯಂತ್ರಗಳ ಮೂಲಕ ನಮ್ಮ ಅಂಗಡಿಗಳನ್ನು ಒಡೆದು ಹಾಕಿದ್ದಾರೆಂದು ಬೀದಿ ಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವೆ ವಾಗ್ವಾದವೂ ನಡೆಯಿತು. ಯಾವುದಕ್ಕೂ ಸೊಪ್ಪು ಹಾಕದ ಅಧಿಕಾರಿಗಳು ಮನ ಬಂದಂತೆ ಜೆಸಿಬಿ ಯಂತ್ರಗಳ ಮೂಲಕ ಅಂಗಡಿ ಮುಂಗಟ್ಟುಗಳನ್ನು ಒಡೆದು ಹಾಕಿ, ಲಾರಿಗಳಲ್ಲಿ ತುಂಬಿಕೊಂಡು ತೆರವು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ವ್ಯಾಪಾರಿಗಳು ಕಣ್ಣೀರು ಹಾಕಿದರು. 

ಕಾರ್ಯಕ್ರಮ ನಿಮಿತ್ತ ಭಾರತದ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಸೇರಿದಂತೆ ವಿವಿಧ ಗಣ್ಯರು ಮೈಸೂರು ನಗರಕ್ಕೆ ಆಗಮಿಸುತ್ತಿದ್ದು, ಗಣ್ಯರು ಸುತ್ತೂರು ಮಠಕ್ಕೆ ಮತ್ತು ಚಾಮುಂಡಿಬೆಟ್ಟಕ್ಕೆ ತೆರಳುವ ಸಂಭವ ಇದ್ದ ಕಾರಣ ನಗರದ ಲಲಿತ್ ಮಹಲ್ ಹೋಟೆಲ್ ರಸ್ತೆಯಲ್ಲಿರುವ ಸುಮಾರು 50ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ಶನಿವಾರ ಬೆಳಗ್ಗೆ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಮುಖ್ಯಮಂತ್ರಿಗಳಿಗೆ ದೂರು

ವಿಶ್ವವಿಖ್ಯಾತ ಅರಮನೆಗಳ ನಗರಿ ಮೈಸೂರಿಗೆ ರಾಷ್ಟ್ರಪರಿಗಳು ಆಗಮಿಸುತ್ತಿರುವುದು ಸಂತೋಷದ ವಿಷಯ ಆದರೇ, ಈ ನೆಪದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಸಣ್ಣ ವ್ಯಾಪಾರಿಗಳ ಮೇಲೆ ಪಾಲಿಕೆ ಅಧಿಕಾರಿಗಳು ದೌರ್ಜನ್ಯ ನಡೆಸಿರುವುದು ಸರಿಯಲ್ಲ, ವ್ಯಾಪಾರಿಗಳಿಗೆ ಕನಿಷ್ಠ ಒಂದು ವಾರದ ಹಿಂದೆ ಸೂಚನೆ ನೀಡಿದ್ದರೆ ಅವರೇ ತೆರವು ಮಾಡುತ್ತಿದ್ದರು. ಆದರೇ, ಪೆಟ್ಟಿಗೆಗಳನ್ನು, ಗಾಡಿಗಳನ್ನು ಒಡೆದು ಹಾಕಿದ್ದು ಸರಿಯಲ್ಲ, ಅವರಿಗೆ ಪಾಲಿಕೆಯೇ ಪುನರ್ವಸತಿ ಕಲ್ಪಿಸಬೇಕು. ಅವರಿಗೂ ಮನೆ, ಸಂಸಾರ, ಮಕ್ಕಳು, ಪೋಷಕರು ಇರುತ್ತಾರೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಮಾನವೀಯತೆ ದೃಷ್ಟಿಯಲ್ಲಿ ಅವರಿಗೆ ಅವಕಾಶ ನೀಡಬೇಕಿತ್ತು, ನಷ್ಟ ಪರಿಹಾರ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.

ಎಂ.ರಸೂಲ್,  ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು