ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿದರೆ ಮಾತ್ರ ಮತಗಳವು ತಡೆಗಟ್ಟಲು ಸಾಧ್ಯ, ಇದನ್ನು ಕಾಂಗ್ರೆಸ್ ಪಕ್ಷ ಹಲವಾರು ದಿನಗಳಿಂದ ಹೇಳುತ್ತಾ ಬಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ತನ್ವೀರ್ ಸೇಠ್ ಹೇಳಿದರು.
ಶನಿವಾರ ಉದಯಗಿರಿ ಬಳಿಯ ತಮ್ಮ ನಿವಾಸದ ಎದುರು ನಡೆದ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ದೌಲತ್ ಬೇಗ್ ಅವರ ಪುತ್ರ ಡಿ.ರೇಹಾನ್ ಬೇಗ್ ಅವರನ್ನು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ನೇಮಕಾತಿ ಪತ್ರವನ್ನು ವಿತರಿಸಿ ಮಾತನಾಡಿದರು.
ಪ್ರದೇಶ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ ಎನ್‌ಆರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಜತೆಗೆ ಬೂತ್ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಇದರಿಂದ ದೇಶದಲ್ಲಿ ಭುಗಿಲೆದ್ದಿರುವ ಮತಗಳವು ಪ್ರಕರಣಗಳ ಬಗ್ಗೆ ನಮ್ಮ ಕಾರ್ಯಕರ್ತರನ್ನು ಜಾಗೃತಗೊಳಿಸಿ, ಮತಗಟ್ಟೆ ಸದಸ್ಯರನ್ನು ನೇಮಿಸಿ ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವವರನ್ನು ಮತ್ತು ಹೊಸ ಮತದಾರರ ಸೇರ್ಪಡೆಗೆ ನಮ್ಮ ಕಾರ್ಯಕರ್ತರು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಮತಗಳನ್ನು ವರ್ಗಾಯಿಸುವ ಹುನ್ನಾರ ನಡೆದಿದ್ದು, ಅದನ್ನು ತಡೆಗಟ್ಟಲು ಚುನಾವಣಾ ಅಧಿಕಾರಿಗಳ ಜತೆ ನಿರಂತರವಾಗಿ ಸಂಪರ್ಕವನ್ನಿಟ್ಟುಕೊಳ್ಳುವಂತೆ ನಮ್ಮ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಂಘಟನಾ ಚತುರರು ಮತ್ತು ಪಕ್ಷದ ಬಗ್ಗೆ ನಿಷ್ಠೆಯುಳ್ಳ ಯುವಕರನ್ನು ವಿವಿಧ ಪದಾಧಿಕಾರಿಗಳಾಗಿ ನೇಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಡಿ.ರೇಹಾನ್ ಬೇಗ್ ಅವರನ್ನು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಇಂದು ನೇಮಕಾತಿ ಪತ್ರವನ್ನು ನೀಡಲಾಗಿದೆ. ಈ ಮೂಲಕ ತಳಮಟ್ಟದ ಸಂಘಟನೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎನ್‌ಆರ್ ಕ್ಷೇತ್ರದಲ್ಲೂ ಮತಗಳವು ನಡೆದಿರುವುದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಲಕ್ಷ್ಮಣ್ ಅವರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್ ನಮ್ಮ ಪಕ್ಷ ಇಡೀ ದೇಶದಲ್ಲಿ ನಡೆದಿರುವ ಮತಗಳವು ಕುರಿತು ಸಾಮೂಹಿಕ ಪ್ರಶ್ನೆ ಎತ್ತಲಾಗಿದೆ. ಇದಕ್ಕಾಗಿ ಇಂತಹ ವಿಚಾರದ ಬಗ್ಗೆ ಚುನಾವಣೆ ನಂತರ ಪ್ರಶ್ನೆ ಮಾಡುವುದಕ್ಕಿಂತ ಮುಂಜಾಗ್ರತೆಯಾಗಿ ಈಗಲೇ ಸಿದ್ದತೆ ಮಾಡಿಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು.
ನಮ್ಮ ಕಾರ್ಯಕರ್ತರು ಕ್ಷೇತ್ರದಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಹೊಸ ಮತದಾರರ ಸೇರ್ಪಡೆ ಮತ್ತು ಕೈ ಬಿಟ್ಟಿರುವ ಮತದಾರರ ಸೇರ್ಪಡೆಗೆ ಕ್ರಮ ವಹಿಸಲಿದ್ದಾರೆ ಎಂದು ಹೇಳಿದರು.
ಇಂದಿನಿಂದ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಮೀಕ್ಷೆ ಕುರಿತು ಮಾತನಾಡಿ, ಸರ್ಕಾರಿ ಕೆಲಸದಲ್ಲಿ ನಮ್ಮ ಕಾರ್ಯಕರ್ತರು ಮೂಗು ತೂರಿಸುವುದಿಲ್ಲ ಆದರೇ, ಜನರು ಯಾವುದೇ ಸಂಕೋಚವಿಲ್ಲದೇ ನಿಮ್ಮ ನಿಮ್ಮ ಜಾತಿಗಳನ್ನು ದಾಖಲಿಸುವಂತೆ ಸಲಹೆ ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಉಪಾಧ್ಯಕ್ಷರಾದ ಷಹೀನ್ ಷಾ ಅಹಮದ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಸೀಂ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ರೇಹಾನ್ ಬೇಗ್,
ಕೆಪಿಸಿಸಿ ಸಂಯೋಜಕರಾದ ಶೌಕತ್ ಅಲಿ ಖಾನ್, ಮುಖಂಡರಾದ ಅಫ್ರೋಜ್ ಖಾನ್, ಮೊಹಮ್ಮದ್ ಶಿಫ್ಟನ್, ಮೊಹಮ್ಮದ್ ರಫಿ, ಡಾ.ಮುರ್ತುಜಾ, ಸೈಯದ್ ಫಾರೂಖ್, ಮಝರ್ ಇತರರು ಇದ್ದರು.
ಶಾಸಕರು, ಕೆಪಿಸಿಸಿ ಕಾಯಾಧ್ಯಕ್ಷರೂ ಆದ್ ತನ್ವೀರ್ ಸೇಠ್ ಅವರ ಶಿಫಾರಸ್ಸಿನ ಮೇರೆಗೆ ನನ್ನನ್ನು ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ನಾನು ಪ್ರಾಮಾಣಿಕತೆಯಿಂದ ಮತ್ತು ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ.
ಡಿ.ರೇಹಾನ್ ಬೇಗ್, ನಗರ ಕಾಂಗ್ರೆಸ್ ಕಾರ್ಯದರ್ಶಿ
0 ಕಾಮೆಂಟ್‌ಗಳು